ನಾಮಫಲಕ ಅಳವಡಿಕೆ ವೇಳೆ ಮಾತಿನ ಚಕಮಕಿ

25blrp1
ಕೋಟೆ ಗಣಪತಿ ದೇಗುಲದ ಸಮೀಪವಿರುವ ಚನ್ನಕೇಶವ ದೇವಾಲಯಕ್ಕೆ ಸೇರಿದ ಆಸ್ತಿಗೆ ಅತಿಕ್ರಮ ಪ್ರವೇಶ ನಿಷೇಧ ನಾಮಫಲಕ ಅಳವಡಿಸುವ ಸಂದರ್ಭ ಖಾಸಗಿ ವ್ಯಕ್ತಿಗಳು ಮತ್ತು ಸಮೀತಿ ಸದಸ್ಯರು ಮಾತನಾಡುತ್ತಿರುವುದು.
Published on

ಬೇಲೂರು: ಬೇಲೂರಿನ ಕೋಟೆ ಗಣಪತಿ ದೇವಸ್ಥಾನ ಸಮೀಪದ ಶ್ರೀಚನ್ನಕೇಶವ ದೇವಸ್ಥಾನಕ್ಕೆ ಸೇರಿದ ಆಸ್ತಿಗೆ ದೇಗುಲ ವ್ಯವಸ್ಥಾಪನಾ ಸಮಿತಿಯಿಂದ ಶುಕ್ರವಾರ ಅತಿಕ್ರಮ ಪ್ರವೇಶ ನಿಷೇಧ ನಾಮಫಲಕ ಅಳವಡಿಸುವ ಸಂದರ್ಭ ಖಾಸಗಿ ವ್ಯಕ್ತಿಗಳಿಂದ ವಿರೋಧ ವ್ಯಕ್ತವಾಗಿ ಮಾತಿನ ಚಕಮಕಿ ನಡೆದು, ಪೊಲೀಸರ ಮಧ್ಯ ಪ್ರವೇಶದಿಂದ ತಣ್ಣಗಾಯಿತು.

ಬೇಲೂರು ಪಟ್ಟಣದಲ್ಲಿರುವ ಶ್ರೀಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿರುವ ಕೋಟೆ ಗಣಪತಿ ದೇಗುಲದ ಸಮೀಪವಿರುವ ಚನ್ನಕೇಶವ ದೇವಾಲಯಕ್ಕೆ ಸೇರಿದ ಸರ್ವೆ ನಂ. 1/ ಎನಲ್ಲಿ 36 ಗುಂಟೆ ಆಸ್ತಿಗೆ ಸಂಬಂಧಿಸಿದಂತೆ ಹಲವು ವರ್ಷಗಳ ಹಿಂದೆ ಸಕಲೇಶಪುರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಈ ಜಾಗದ ವಿಚಾರವಾಗಿ ಖಾಸಗಿ ವ್ಯಕ್ತಿಗಳಿಗೂ ಹಾಗೂ ದೇಗುಲ ಆಡಳಿತ ಮಂಡಳಿಯ ವಿಚಾರಣೆ ನಡೆಸಿದ್ದು, ಅಲ್ಲಿನ ನ್ಯಾಯಾಲಯದಲ್ಲಿ ಅಂತಿಮವಾಗಿ ಉಪ ವಿಭಾಧಿಕಾರಿಗಳು ಶ್ರೀಚನ್ನಕೇಶವ ದೇಗುಲದ ಆಸ್ತಿಯೆಂದು ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಖಾಸಗಿ ವ್ಯಕ್ತಿಗಳು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯ ಖಾಸಗಿ ವ್ಯಕ್ತಿಗಳ ದೂರನ್ನು ತಿರಸ್ಕರಿಸಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಗೆಹರಿಸಿ ಕೊಳ್ಳುವಂತೆ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲೂ ಚನ್ನಕೇಶವ ದೇವಾಲಯದ ಪರವಾಗಿ ಆದೇಶ ನೀಡಲಾಗಿತ್ತು. ಜಿಲ್ಲಾಧಿಕಾರಿ ಮೌಖಿಕ ಸೂಚನೆಯಂತೆ ದೇವಸ್ಥಾನದ ಇಒ ವಿದ್ಯುಲತಾ ಹಾಗೂ ಚನ್ನಕೇಶವ ದೇಗುಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಾರಾಯಣಸ್ವಾಮಿ ಮತ್ತು ನಿರ್ದೇಶಕರ ನೇತೃತ್ವದಲ್ಲಿ ಗಣಪತಿ ದೇಗುಲ ಪಕ್ಕದ ಜಾಗಕ್ಕೆ ಅತಿಕ್ರಮಣ ಪ್ರವೇಶ ನಿಷೇಧ ಎಂಬ ನಾಮಫಲಕ ಅಳವಡಿಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಖಾಸಗಿ ವ್ಯಕ್ತಿಗಳ ಸಂಬಂಧಿಕರು ನಾಮಫಲಕ ತೆಗೆಯುವಂತೆ ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಇದನ್ನು ಅರಿತ ದೇಗುಲದ ಇಒ ಹಾಗೂ ವ್ಯವಸ್ಥಾಪನ ಸಮಿತಿಯವರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇವಾಲಯದ ಪರವಿರುವ ಜಿಲ್ಲಾಧಿಕಾರಿ ಆದೇಶ ನೋಡಿ, ನಾಮ ಫಲಕವನ್ನು ಯಾರು ತೆಗೆಯದಂತೆ ದಾಖಲಾತಿಗಳನ್ನು ಠಾಣೆಗೆ ತರುವಂತೆ ಸೂಚಿಸಿ ತೆರಳಿದರು. ನಂತರ ಎರಡು ಕಡೆಯವರು ಠಾಣೆಗೆ ಬರುವುದಾಗಿ ಸ್ಥಳದಿಂದ ಹೊರ ನಡೆದರು.

ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ, ಗಣಪತಿ ದೇಗುಲ ಪಕ್ಕದಲ್ಲಿರುವ ಸರ್ವೇ ನಂ. 1/ಎ ನಲ್ಲಿ 36 ಗುಂಟೆ ಜಾಗವು ನಮ್ಮ ದೇಗುಲಕ್ಕೆ ಸೇರಿದ್ದೆಂದು ನ್ಯಾಯಾಲಯದಲ್ಲಿ ಆದೇಶವಾದ ನಂತರ ನಾವು ಯಾರೂ ಇಲ್ಲಿ ಪ್ರವೇಶಿಸದಂತೆ ನಾಮಫಲಕ ಅಳವಡಿಸಲು ಮುಂದಾದೆವು. ಆದರೆ, ಖಾಸಗಿ ವ್ಯಕ್ತಿಗಳು ನಾಮಫಲಕ ತೆರವುಗೊಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ನಾವು ಯಾವುದೇ ಕಾರಣಕ್ಕೂ ದೇವಸ್ಥಾನದ ಆಸ್ತಿಯನ್ನು ಬೇರೆಯವರ ಪಾಲಾಗಲು ಬಿಡುವುದಿಲ್ಲ ಎಂದರು.

ದೇವಸ್ಥಾನದ ಇಒ ವಿದ್ಯುಲತಾ, ಸಮಿತಿ ಸದಸ್ಯರಾದ ರವಿಶಂಕರ್, ಮೋಹನ್ ಕುಮಾರ್, ರಂಗನಾಥ್, ಪ್ರಮೋದ್, ಸುಧಾ, ವಿಜಯಲಕ್ಷ್ಮೀ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net