

ಬೂದಿಕೋಟೆ : ಗ್ರಾಮ ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುಂಚೆಯೇ ಭರದ ಪ್ರಚಾರ ನಡೆಸುತ್ತಿದ್ದು, ಕೆಲ ಗ್ರಾಮಗಳಲ್ಲಿ ಅವಿರೋಧ ಆಯ್ಕೆಗೆ ಕಸರತ್ತು ನಡೆಯುತ್ತಿದೆ.
ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ತಂತ್ರ ಹೆಣೆೆಯುತ್ತಿದ್ದಾರೆ. ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿ ವ್ಯಾಪ್ತಿಗೆ 5 ಪಂಚಾಯಿತಿಗಳು ಒಳಪಟ್ಟಿದ್ದು ಒಟ್ಟು 87 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೆ ಆಕಾಂಕ್ಷಿಗಳು ಕೆಲವೆಡೆ ಪ್ರಚಾರ ಆರಂಭಿಸಿ ಮತದಾರರ ನಾಡಿ ಮೀಡಿತ ಅರಿಯಲು ಪ್ರಯತ್ನಿಸಿದ್ದಾರೆ.
ಅವಿರೋಧ ಆಯ್ಕೆಗೆ ಕಸರತ್ತು: ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮುಖಂಡರು ಗ್ರಾಮಾಭಿವೃದ್ದಿಗಾಗಿ ಪಕ್ಷಾತೀತವಾಗಿ ಸಭೆ ಸೇರಿ ಗ್ರಾಮದ ಅಭಿವೃದ್ದಿಗೆ ಕಾಳಜಿ ಇರುವವರನ್ನು ಅವಿರೋಧ ಆಯ್ಕೆಗೆ ಪ್ರಯತ್ನಿಸುತ್ತಿದ್ದಾರೆ. ಗ್ರಾಮದ ಹಳೆಯ ದೇವಸ್ಥಾನ ಜೀರ್ಣೋದ್ಧಾರ, ಶಾಲೆಯ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ಸರ್ಕಾರದ ಸೌವಲತ್ತುಗಳನ್ನು ಅರ್ಹ ಲಾನುಭವಿಗಳಿಗೆ ಸೇರಿಸಲು ಬದ್ಧತೆ ಸೇರಿ ಗ್ರಾಮದಲ್ಲಿನ ಹಲವು ಅಭಿವೃದ್ಧಿ ಕಾರ್ಯಗಳಿಗೆ ಯಾರು ಧನ ಸಹಾಯ ಮಾಡುತ್ತಾರೋ ಅಂತಹವರನ್ನು ಅವಿರೋಧ ಆಯ್ಕೆ ಮಾಡಲು ತೀರ್ಮಾನಿಸಿದ್ದಾರೆ.
ಗ್ರಾಮದ ಮುಖಂಡರೆಲ್ಲಾ ಸೇರಿ ಅವಿರೋಧ ಆಯ್ಕೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಸರ್ಕಾರಕ್ಕೆ ಹೊರೆ ಕಡಿಮೆಯಾಗುವ ಜತೆಗೆ ಗ್ರಾಮಸ್ಥರಲ್ಲಿ ಒಗ್ಗಟ್ಟು ಮೂಡಿ, ವೈಷಮ್ಯಕ್ಕೆ ಅವಕಾಶವಿರುವುದಿಲ್ಲ. ಗ್ರಾಮದ ಒಂದಿಷ್ಟು ಅಭಿವೃದ್ಧಿ ಕಾರ್ಯಗಳಿಗೆ ಧನಸಹಾಯವೂ ಸಿಗಲಿದೆ. - ಚಂದ್ರಶೇಖರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಬೂದಿಕೋಟೆ ಈ ಬಾರಿಯ ಚುನಾವಣೆ ಬಾರೀ ಕುತೂಹಲದಿಂದ ಕೂಡಿದ್ದು, ಆಯಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಪೈಪೋಟಿ ಹೆಚ್ಚಾಗಿದೆ. ಹಲವು ಗ್ರಾಮಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಸಲುವಾಗಿ ಗ್ರಾಮದ ಮುಖಂಡರೆಲ್ಲಾ ಸೇರಿ ಅವಿರೋಧ ಆಯ್ಕೆಗೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ. - ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಗುಲ್ಲಹಳ್ಳಿ