ನಾಮನಿರ್ದೇಶಿತ ಸದಸ್ಯರ ನೇಮಕಕ್ಕೆ ವಿರೋಧ

22srt-1
Published on

ಶಿರಹಟ್ಟಿ : ಗ್ರಾ.ಪಂ.ಗಳಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ನೀಡಿರುವ ಅಧಿಕಾರವನ್ನು ವಾಪಸ್ ಪಡೆಯಲು ಆಗ್ರಹಿಸಿ ಪಟ್ಟಣದಲ್ಲಿ ಕಾಂಗ್ರೆಸ್​ನಿಂದ ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ. ಮಾಗಡಿ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾ.ಪಂ. ಚುನಾವಣೆ ಮುಂದೂಡುವ ಕಾರಣ ಇಟ್ಟುಕೊಂಡು ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಿರುವ ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಆರೋಪಿಸಿದರು.

ಈ ಹಿಂದೆ 1994 ರಿಂದ 1999 ರವರೆಗೆ ಗ್ರಾ.ಪಂ. ಸದಸ್ಯರ ಅಧಿಕಾರಾವಧಿ ಮುಗಿದಿದ್ದರಿಂದ 1999 ರಿಂದ 2000 ವರೆಗೆ ಒಂದು ವರ್ಷದ ಅವಧಿಗೆ ಹಿಂದಿನ ಸದಸ್ಯರೇ ಅಧಿಕಾರ ನಡೆಸಿಕೊಂಡು ಹೋಗುವಂತೆ ಸರ್ಕಾರ ಆದೇಶ ನೀಡಿತ್ತು. ಈಗಲೂ ಅದೇ ತೀರ್ವನಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಸರ್ಕಾರ ತಮ್ಮ ನಿರ್ಧಾರ ಬದಲಿಸದೆ ಗ್ರಾ.ಪಂ.ಗಳಿಗೆ ಸಮಿತಿ ನೇಮಿಸಲು ಮುಂದಾದರೆ ರಾಜ್ಯಾದ್ಯಂತ ಕಾಂಗ್ರೆಸ್ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಎಸ್.ಎನ್. ಪಾಟೀಲ, ಹುಮಾಯೂನ ಮಾಗಡಿ, ವೀರಣ್ಣ ಅಂಗಡಿ, ಡಿ.ಕೆ. ಹೊನ್ನಪ್ಪನವರ, ಅಜಿತ ಪಿಡ್ಡಿ, ತಾ.ಪಂ. ಸದಸ್ಯ ದೇವಪ್ಪ ಲಮಾಣಿ, ರಮೇಶ ನಿರ್ವಾಣಿಶೆಟ್ಟರ, ವಿರೂಪಾಕ್ಷ ನಂದೆಣ್ಣವರ, ಪ.ಪಂ. ಸದಸ್ಯ ಮಂಜುನಾಥ ಘಂಟಿ, ಹೊನ್ನಪ್ಪ ಶಿರಹಟ್ಟಿ, ಆಶ್ರತ್ ಢಾಲಾಯತ್, ಇಸಾಕ್ ಆದ್ರಳ್ಳಿ, ಮಹಾಂತೇಶ ದಶಮನಿ ಇತರರಿದ್ದರು.

ಪರಸ್ಪರ ಅಂತರ ಕಾಯ್ದುಕೊಳ್ಳದ ಕಾರ್ಯಕರ್ತರು: ಮನವಿ ಸಲ್ಲಿಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಜಮಾಯಿಸುವ ಮೂಲಕ ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದಕ್ಕೆ ತಹಸೀಲ್ದಾರ್ ಗೋಣೆಣ್ಣವರ ಸಿಡಿಮಿಡಿಗೊಂಡರು. ವಾಸ್ತವಿಕ ಪರಿಸ್ಥಿತಿ ಗೊತ್ತಿದ್ದರೂ ನಿರ್ಲಕ್ಷ್ಯ ತೋರುವುದು ಸರಿಯಲ್ಲ, ಎಲ್ಲರೂ ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಕರೊನಾ ಮಹಾಮಾರಿಯನ್ನು ತಡೆಯಲು ಸಹಕರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net