

ಮೈಸೂರು: ನಾಮಧಾರಿಗೌಡ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸಬೇಕು ಎಂದು ಅಖಿಲ ನಾಮಧಾರಿಗೌಡ ಸಂಘ ಆಗ್ರಹಿಸಿದೆ.
ಈ ಸಮುದಾಯದವರು ಮೈಸೂರು, ಮಂಡ್ಯ, ಹಾಸನ, ಕೊಡಗು ಜಿಲ್ಲೆಯ ಕೆಲ ತಾಲೂಕುಗಳ ಕೆಲ ಹಳ್ಳಿಗಳಲ್ಲಿ ಮಾತ್ರ ನೆಲೆಸಿದ್ದಾರೆ. ಸುಮಾರು 2 ಲಕ್ಷ ಜನಸಂಖ್ಯೆ ಮಾತ್ರ ಇದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮುದಾಯದಿಂದ ರಾಜಕೀಯವಾಗಿ ಎಂಎಲ್‌ಸಿ, ಎಂಎಲ್‌ಎ, ಎಂಪಿ ಸಹ ಯಾರೂ ಆಗಿಲ್ಲ. ಅಲ್ಪಸಂಖ್ಯಾತರಾದ ಕಾರಣ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಪಿ.ಚನ್ನರೇವಣ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಪ್ರವರ್ಗ 2ಎಗೆ ಮತ್ತು ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸಮುದಾಯವನ್ನು ಸೇರಿಸಲು 25 ವರ್ಷಗಳಿಂದ ಆಗ್ರಹಿಸಲಾಗುತ್ತಿದೆ. ಸರ್ಕಾರಕ್ಕೆ, ಮುಖ್ಯಮಂತ್ರಿಗೆ, ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಸಕಾರಾತ್ಮಕವಾಗಿ ಸ್ಪಂದನೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಕೃತಿ ಬಿಡುಗಡೆ: ಸಂಘದ ಅಮೃತ ಮಹೋತ್ಸವ, ಪ್ರೊ.ಎಚ್.ಸಿ.ಲೋಹಿತಾಶ್ವ ಹುಲ್ಲಟ್ಟಿ ಅವರ ‘ನಾಮಧಾರಿಗೌಡರ ನೆಲೆನಾಡು’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಫೆ.26ರಂದು ಬೆಳಗ್ಗೆ 10.30 ಗಂಟೆಗೆ ಸರಸ್ವತಿಪುರಂನ ಗಂಗೋತ್ರಿ ಬಡಾವಣೆಯ ನಾಮಧಾರಿಗೌಡ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಲಾಗಿದೆ. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಎಂಎಲ್‌ಸಿ ಮರಿತಿಬ್ಬೇಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಮೃತ ಮಹೋತ್ಸವದ ಅಂಗವಾಗಿ ವರ್ಷವಿಡೀ ವಿವಿಧ ಚಟುವಟಿಕೆಗಳನ್ನು ನಡೆಸಲಾಗುವುದು. ಸ್ಮರಣ ಸಂಚಿಕೆಯನ್ನು ಹೊರತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.