ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಮಳೆ

25.NPK-..1
Published on

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಬಿರುಸಿನ ಗಾಳಿ, ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಹಾಗೂ ತಡೆಗೋಡೆ ಬಿದ್ದು ಭಾರಿ ನಷ್ಟ ಸಂಭವಿಸಿದೆ.

ಮಡಿಕೇರಿ-ಭಾಗಮಂಡಲ, ನಾಪೋಕ್ಲು ಮುಖ್ಯ ಸಂಪರ್ಕ ರಸ್ತೆಯ ಬೆಟ್ಟಗೇರಿ ಗಣಪತಿ ದೇವಾಲಯದ ಸಮೀಪಯಲ್ಲಿ ಭಾನುವಾರ ಬೆಳಗ್ಗೆ ಗಾಳಿ, ಮಳೆಗೆ ಮರ ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಘಟನೆಯಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಬಿದ್ದಿದ್ದ ವಿದ್ಯುತ್ ಕಂಬ ಹಾಗೂ ಮರವನ್ನು ಬಳಿಕ ತೆರವುಗೊಳಿಸಲಾಯಿತು.

ಇಲ್ಲಿನ ಹಳೇ ತಾಲೂಕಿನಿಂದ ಕೆಟೋಳಿರ ಮನೆಗೆ ತೆರಳುವ ರಸ್ತೆಯಲ್ಲಿ ಮರವೊಂದು ಮುರಿದು ರಸ್ತೆಗೆ ಬಿದ್ದಿದ್ದು ಸಂಚಾರ ಸ್ಥಗಿತಗೊಂಡಿದೆ.

ಸಮೀಪದ ಹಳೇ ತಾಲೂಕಿನಲ್ಲಿರುವ ಶ್ರೀಭಗವತಿ ದೇವಸ್ಥಾನದ ಆವರಣದಲ್ಲಿರುವ ಮುಖ್ಯ ಅರ್ಚಕ ಹರೀಶ್‌ಭಟ್ ಅವರ ಸೌದೆ ಕೊಟ್ಟಿಗೆ ಮೇಲೆ ಶನಿವಾರ ರಾತ್ರಿ ಗಾಳಿ, ಮಳೆಗೆ ಬೈನೇ ಮರ ಬಿದ್ದಿದ್ದು ಕಟ್ಟಡಕ್ಕೆ ಹಾನಿಯಾಗಿದೆ.

ಚೇಲಾವರ ಗ್ರಾಮದ ಶ್ರೀಭಗವತಿ ದೇವಸ್ಥಾನದ ಮೇಲೆ ಮರ ಬಿದ್ದು ದೇವಸ್ಥಾನದ ಛಾವಣಿ ತೀವ್ರ ಹಾನಿಯಾಗಿ ಭಾರಿ ನಷ್ಟ ಸಂಭವಿಸಿ ಪೂಜಾ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ.

ಇಲ್ಲಿಯ ಚೆರಿಯಪರಂಬು ನಿವಾಸಿ ಅರಫತ್ ಅವರ ಮನೆಯ ತಡೆಗೋಡೆ ಮತ್ತು ಲೈನ್ ಮನೆಯ ಒಂದು ಭಾಗ ಕುಸಿದು ಹಾನಿಯಾಗಿರುವುದರಿಂದ ನಷ್ಟ ಸಂಭವಿಸಿದೆ.

ನೆಲಜಿ ಗ್ರಾಮದ ಮಾಲೆಯಂಡ ಮತ್ತು. ಚೇಕ್ ಪುವಂಡ ಐನ್ ಮನೆಗೆ ತೆರಳುವ ರಸ್ತೆಯ ಮೇಲೆ ಭಾರಿ ಗಾತ್ರದ ಮರ ಬಿದ್ದಿದೆ. ಇದರಿಂದ ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ಗಾಳಿ, ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಮುರಿದುಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು ಪಟ್ಟಣ ಸೇರಿದಂತೆ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ವಿದ್ಯುತ್ ಪೂರೈಕೆ ಮಾಡಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಾಲಡಿಯಲ್ಲಿ 150.4 ಮಿ.ಮೀ.ಗರಿಷ್ಠ ಮಳೆಯಾಗಿದೆ.

ನಾಪೋಕ್ಲು ವ್ಯಾಪ್ತಿಯಲ್ಲಿ 3.42 ಇಂಚು ಮಳೆ ಸುರಿದಿದೆ. ಇದುವರೆಗೆ 23.92 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 18.44 ಇಂಚು ಮಳೆಯಾಗಿತ್ತು.

ಅಯ್ಯಂಗೇರಿಯಲ್ಲಿ 5.16 ಇಂಚು ಮಳೆಯಾಗಿದ್ದು ಜನವರಿಯಿಂದ ಇಂದಿನವರೆಗೆ ಒಟ್ಟು 19.47 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಗೆ 8.15 ಇಂಚು ಮಳೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net