

ಕೊಡಗು: ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಶೌರ್ಯ ಸದಸ್ಯರು ನಡೆಸುತ್ತಿರುವ ಹಣ್ಣಿನ ಗಿಡ ನಾಟಿ ಅಭಿಯಾನ ಶ್ಲಾಘನೀಯ ಎಂದು ನಾಪೋಕ್ಲು ಸಮೀಪದ ಕುಂಜಲಗೇರಿ ಗ್ರಾಮದ ಶ್ರೀ ಈಶ್ವರ ಬೊಟ್ಲಪ್ಪ ದೇವಸ್ಥಾನದ ಕಾರ್ಯದರ್ಶಿ ಕುತಂಡ ಬೋಪಯ್ಯ ಹೇಳಿದರು.
ದೇವಾಲಯದ ಆವರಣದಲ್ಲಿ ಸೋಮವಾರ ನಾಪೋಕ್ಲು ಶೌರ್ಯ ಘಟಕದ ಸದಸ್ಯರು ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಹಣ್ಣಿನ ಗಿಡಗಳನ್ನು ನೆಡುವುದರಿಂದ ಪರಿಸರ ರಕ್ಷಣೆಯೊಂದಿಗೆ ಪ್ರಾಣಿ-ಪಕ್ಷಿಗಳಿಗೆ ಆಹಾರದ ಕೊರತೆ ನೀಗಿಸಲು ಸಾಧ್ಯ. ಅಲ್ಲದೆ, ಕಾಡುಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಬಹುದು ಎಂದರು.
ನಾಪೋಕ್ಲು ಶೌರ್ಯ ಘಟಕದ ಸಂಯೋಜಕ ಬಾಳೆಯಡ ದಿವ್ಯ ಮಂದಪ್ಪ ಮಾತನಾಡಿ, 3 ವರ್ಷಗಳಿಂದ ನಾನಾ ಕಡೆಗಳಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ. ಗಿಡಗಳು ಚೆನ್ನಾಗಿ ಬೆಳೆದು ಕೆಲವೆಡೆ ಹಣ್ಣುಗಳನ್ನು ಬಿಟ್ಟಿರುವುದು ಸಂತಸದ ಸಂಗತಿ ಎಂದರು.
ಹೊದ್ದೂರು ಗ್ರಾಮದ ವಾಟೆಕಾಡು ನರ್ಸರಿಯಿಂದ ಸುಮಾರು 100 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಶೌರ್ಯ ಘಟಕದಿಂದ ಖರೀದಿಸಲಾಗಿತ್ತು. ಘಟಕದ 23 ಸದಸ್ಯರು ಪಾಲ್ಗೊಂಡಿದ್ದರು.