

ನಾಪೋಕ್ಲು: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸರು ಕೌಟುಂಬಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲೂ ಕಾರ್ಯ ಪ್ರವೃತ್ತರಾಗಿ ಗಮನ ಸೆಳೆದಿದ್ದಾರೆ.
ಇಲ್ಲಿನ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಮಹಿಳಾ ಸಹೋದ್ಯೋಗಿಯ ಸೀಮಂತ ಕಾರ್ಯವನ್ನು ಸಾಂಪ್ರದಾಯಿಕವಾಗಿ ನೆರವೇರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸಿಬ್ಬಂದಿ ಸಿ.ಪಿ.ಪೂರ್ಣಿಮಾ ಅವರ ಸೀಮಂತ ಕಾರ್ಯವನ್ನು ಪೊಲೀಸ್ ಠಾಣೆಯಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ಮಡಿಲು ತುಂಬಿ ಬಳೆ, ಕುಂಕುಮ, ವಸ್ತ್ರ, ವಿವಿಧ ಬಗೆಯ ತಿಂಡಿ ತಿನಿಸುಗಳು, ಹಣ್ಣು ಹಂಪಲು, ತಾಂಬೂಲ ಸೇರಿದಂತೆ ಶಡೋಪಚಾರಗಳನ್ನು ನೆರವೇರಿಸಿ ಉತ್ತಮ ಕೌಟುಂಬಿಕ ಜೀವನ ನಿರ್ವಹಣೆಗಾಗಿ ಸಿಬ್ಬಂದಿ ಹಾರೈಸಿದರು.
ಠಾಣಾಧಿಕಾರಿ ಮಂಜುನಾಥ ಮಾತನಾಡಿ, ಮಹಿಳೆಯ ಜೀವನದಲ್ಲಿ ನವ ಮಾಸಗಳು ಒಂದು ಪ್ರಮುಖ ಘಟ್ಟ. ತಾಯಿಯಾಗಿ ಜೀವನ ನಿರ್ವಹಣೆ ಮಾಡಬೇಕಾದಲ್ಲಿ ಆಕೆಗೆ ದೇವರ ಅನುಗ್ರಹವು ಮುಖ್ಯ ಹಾಗೂ ನಮ್ಮೆಲ್ಲರ ಹಾರೈಕೆ ಅಗತ್ಯ. ಈ ನಿಟ್ಟಿನಲ್ಲಿ ಸೀಮಂತ ಕಾರ್ಯವನ್ನು ನೆರವೇರಿಸಲಾಗಿದೆ. ದೇವರು ಸಿಬ್ಬಂದಿಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಹಾರೈಸಿದರು.
ಈ ಸಂದರ್ಭ ಠಾಣೆಯ ಎಲ್ಲ ಸಿಬ್ಬಂದಿ ವರ್ಗ ಹಾಜರಿದ್ದರು.