ನಾಪತ್ತೆಯಾದ ಬಾಲಕ 3 ಗಂಟೆಯಲ್ಲೆ ಪತ್ತೆ ಹಚ್ಚಿದ ಪೊಲೀಸರು

Crime Logo
Published on

ಕಲಬುರಗಿ: ನಗರದ ಎನ್‌ಜಿಒ ಕಾಲನಿಯ ದತ್ತ ನಗರದ ಮನೆ ಎದುರಿನಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷ ವಯಸ್ಸಿನ ಬಾಲಕನನ್ನು ಅಶೋಕ ನಗರ ಪೊಲೀಸ್ ಠಾಣೆಯ ಪೊಲೀಸರು ಮೂರು ಗಂಟೆಯಲ್ಲೇ ಪತ್ತೆ ಹಚ್ಚಿಸಿದ್ದಾರೆ. ಬಾಲಕ ವೇದಾಂತ ಜಾಧವ್ ನಾಪತ್ತೆಯಾದ ಕುರಿತು ಪಾಲಕರು ಠಾಣೆಗೆ ದೂರು ನೀಡಲು ಬಂದ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.

ದತ್ತ ನಗರದ ಮನೆಯಿಂದ ಪರಿಶೀಲನೆ ಆರಂಭಿಸಿದ ಪೊಲೀಸ್ ಅಧಿಕಾರಿ ಸಿಬ್ಬಂದಿ ಸರಣಿಯಂತೆ ಅಕ್ಕಪಕ್ಕದ ಬಡಾವಣೆಗಳಲ್ಲಿ ತಪಾಸಣೆ ನಡೆಸುತ್ತ ತೆರಳಿದ್ದು, ಮನೆಯಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿನ ಗಾರ್ಡ್ನ ಮನೆಯೊಂದರ ಎದುರು ಬಾಲಕ ಪತ್ತೆಯಾಗಿದ್ದಾನೆ.

ಆಟವಾಡುತ್ತ ಬಾಲಕ ತೆರಳಿದ್ದು, ಮನೆಯ ದಾರಿ ತಪ್ಪಿದ್ದಾನೆ. ನಂತರ ಅಳುತ್ತ ಮುಂದೆ ಸಾಗಿದ್ದು, ವಾಪಸ್ ಮನೆಗೆ ಬರಲು ದಾರಿ ಮರೆತ್ತಿದ್ದಾನೆ. ಸರಿಯಾಗಿ ತಂದೆ ತಾಯಿ ಹೆಸರು ಹೇಳಲು ಆಗಿಲ್ಲ. ಈ ಮಧ್ಯೆ ಬಾಲಕ ನಿದ್ರೆಗೆ ಜಾರಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದು, ಹುಡುಕಾಡುತ್ತ ಹೋದಾಗ ಅಳುತ್ತ ಮನೆಯೊಂದರ ಎದುರು ಕುಳಿತ್ತಿದ್ದ ಬಾಲಕನ್ನು ಗುರುತಿಸಿದ ಪೊಲೀಸರು ಕರೆತಂದು, ಪಾಲಕರಿಗೆ ಒಪ್ಪಿಸಿದ್ದಾರೆ.

ಪಿಐ ಅರುಣಕುಮಾರ ನೇತೃತ್ವದಲ್ಲಿ ಪಿಎಸ್‌ಐ ಸಲೀಂ, ಸಿಬ್ಬಂದಿ ಶಿವಲಿಂಗ, ಚಂದ್ರು, ವೈಜನಾಥ, ಸಂತೋಷ ಬಿರಾದಾರ ಸೇರಿ ಇತರ ಸಿಬ್ಬಂದಿ ಹುಡುಕಾಟದಲ್ಲಿ ತೊಡಗಿದ್ದರು. ಬಾಲಕನ ಪತ್ತೆ ಹಚ್ಚಿದ ಅಧಿಕಾರಿ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net