ಗುಬ್ಬಿ: ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದ ಉಪ್ಪಿನಕಾಯಿ ಫ್ಯಾಕ್ಟರಿ ಹಿಂಭಾಗದ ಮಾವಿನ ತೋಪಿನಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 35 ವರ್ಷದ ಶವ ಪತ್ತೆಯಾಗಿದೆ. ಮೃತನನ್ನು ನೇಪಾಳ ಮೂಲದ ನಿರ್ಮಲ್ ಜವಾನ್ ತಾಪಾ ಎಂದು ಗುರುತಿಸಲಾಗಿದೆ. ನಿರ್ಮಲ್ ಹಾಗೂ ಆತನ ಸಹೋದರ ಪಟ್ಟಣದ ವಿವಿಧೆಡೆ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ನಿರ್ಮಲ್ ಮಂಗಳವಾರ ಬೆಳಗ್ಗೆ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ಬಗ್ಗೆ ಮೃತರ ಸಹೋದರ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.