

ಮೈಸೂರು: ಎಚ್.ಡಿ.ರೇವಣ್ಣ ಮೇಲಿರುವ ಕಿಡ್ನಾಪ್ ಪ್ರಕರಣದ ಮಹಿಳೆಯನ್ನು ರೇವಣ್ಣ ಆಪ್ತ ರಾಜಗೋಪಾಲ್ ತೋಟದ ಮನೆಯಲ್ಲಿ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿಲ್ಲ. ಹುಣಸೂರಿನ ಕರಿಗೌಡ ಬೀದಿಯ ಪವಿತ್ರಹರೀಶ್‌ಗೌಡ ಎಂಬವರ ಮನೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದು ಸುಳ್ಳು ಎಂದು ಸಾಬೀತುಪಡಿಸಿದರೆ ನಾನೇ ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಶಾಸಕ ಸಾ.ರಾ.ಮಹೇಶ್ ಸವಾಲು ಹಾಕಿದರು.
ಎಚ್.ಡಿ.ರೇವಣ್ಣ ಮೇಲೆ ಹೊರಿಸಿರುವ ಕಿಡ್ನಾಪ್ ಪ್ರಕರಣ ದುರುದ್ದೇಶದಿಂದ ಕೂಡಿದೆ. ಈ ವಿಷಯ ರಾಷ್ಟ್ರೀಯ ಮಾಧ್ಯಮದಲ್ಲಿ ಮೊದಲು ಬಿತ್ತರವಾದ ಬಳಿಕ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಹರಣ ಪ್ರಕರಣದ ಹಿಂದಿನ ರೂವಾರಿ ಯಾರು? ರಾಜಗೋಪಾಲ್ ತೋಟದ ಮನೆಯಲ್ಲಿ ಮಹಿಳೆಯನ್ನು ವಶಕ್ಕೆ ಪಡೆದ ವಿಡಿಯೋವನ್ನು ಏಕೆ ಎಸ್‌ಐಟಿ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಕಿಡ್ನಾಪ್ ಪ್ರಕರಣದ ಮಹಿಳೆ ಹುಣಸೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದರು. ಅವರನ್ನು ಎಸ್‌ಐಟಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ. ಯಾವ ಅಧಿಕಾರಿ ಯಾರೊಂದಿಗೆ ಫೋನ್ ಮಾತನಾಡಿದ್ದರು? ಆ ಸ್ಥಳದಲ್ಲಿರುವ ಮೊಬೈಲ್ ಟವರ್‌ನಿಂದ ಬಂದು ಹೋಗಿರುವ ಒಳ ಕರೆ-ಹೊರ ಕರೆಗಳನ್ನು ಪರಿಶೀಲಿಸಿದರೆ ಹಿಂದಿನ ಸತ್ಯ ಬಹಿರಂಗವಾಗಲಿದೆ ಎಂದರು.
ಕಿಡ್ನಾಪ್ ಪ್ರಕರಣದ ಹಿಂದೆ ಯಾರು ಇದ್ದಾರೆ. ಕಿಡ್ನಾಪ್ ಆದ ಮಹಿಳೆಯ ಮಗನಿಂದ ದೂರು ಕೊಡಿಸಿದವರು ಯಾರು? ಆ ದೂರನ್ನು ಬರೆದುಕೊಟ್ಟವರು ಯಾರು? ಆ ಮಗನಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಎಸ್‌ಐಟಿ ಕೆಲ ಅಧಿಕಾರಿಗಳು ಕಾಂಗ್ರೆಸ್‌ನ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಅಶ್ಲೀಲ ದೃಶ್ಯ ಇರುವ ಪೆನ್‌ಡ್ರೈವ್ ಹಂಚಿಕೆ ಮಾಡಿದವರನ್ನು ಈವರೆಗೆ ಏಕೆ ವಶಕ್ಕೆ ಪಡೆದು ತನಿಖೆ ಮಾಡಿಲ್ಲ. ಕ್ರಮವನ್ನೂ ತೆಗೆದುಕೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು.
ಜೆಡಿಎಸ್, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆದಿದೆ. ಹಳೇ ಮೈಸೂರು ಭಾಗದಲ್ಲಿರುವ ಪಕ್ಷದ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದ್ದು, ನಮ್ಮ ಕೆಲ ನಾಯಕರನ್ನೂ ಹೆದರಿಸಲಾಗಿದೆ. ಇದಕ್ಕಾಗಿ ಕೆಲ ಎಸ್‌ಐಟಿ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ಹೆಸರು ಹೇಳಬೇಡಿ. ನನ್ನ ಬಾಯಿಯಿಂದಲೂ ಅವರ ಹೆಸರು ಹೇಳಿಸಬೇಡಿ. ಅವರು ತಪ್ಪು ಮಾಡಿದ್ದಾರೋ, ಇಲ್ಲವೋ ತನಿಖೆಯಿಂದ ಸಾಬೀತಾಗಲಿದೆ. ಆದರೆ ಅಶ್ಲೀಲ ವಿಡಿಯೋ ಹಂಚುವ ಮೂಲಕ ಕರ್ನಾಟಕದ ಜನರು ತಲೆತಗ್ಗಿಸುವಂತೆ ಮಾಡಲಾಗಿದೆ ಎಂದರು.
ಅವರ ಶಕ್ತಿ ಅನುಸಾರ ಒಕ್ಕಲಿಗ ಸಮುದಾಯದ ನಾಯಕರಾಗಲಿ. ಅದನ್ನು ಸಮುದಾಯದವರು ತೀರ್ಮಾನ ಮಾಡುತ್ತಾರೆ. ಆದರೆ ಈ ಪ್ರಕರಣವನ್ನು ಜನರು ನೋಡುತ್ತಿದ್ದಾರೆ. ಅವರೇ ನಿರ್ಧಾರ ಮಾಡಲಿದ್ದಾರೆ ಎಂದರು.