

ಕೆ.ಎಂ.ದೊಡ್ಡಿ: ನಾನು ರಾಜಕೀಯಕ್ಕೆ ಬಂದಿರುವುದು ಜನರ ಸೇವೆ ಮಾಡಲು ಹೊರತು ದ್ವೇಷ ರಾಜಕಾರಣ ಮಾಡಲು ಅಲ್ಲ. ನನಗೆ ಮದ್ದೂರು ಕ್ಷೇತ್ರ ಅಭಿವೃದ್ಧಿ ಹೊಂದಬೇಕು ಎಂಬುದು ನನ್ನ ಗುರಿ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಕ್ಯಾತಘಟ್ಟ, ಅಜ್ಜಹಳ್ಳಿ, ಕಳ್ಳಿಮೆಳ್ಳೆದೊಡ್ಡಿ, ತೊರೆಚಾಕನಹಳ್ಳಿ, ಬೊಮ್ಮನದೊಡ್ಡಿ ಗ್ರಾಮಗಳಲ್ಲಿ ಭಾನುವಾರ ಜನಸಂರ್ಪಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕಾರಣ ಚುನಾವಣಾ ಸಂದರ್ಭದಲ್ಲಿ ಮಾತ್ರ. ಇನ್ನುಳಿದ ವೇಳೆ ಕ್ಷೇತ್ರದ ಜನರ ಸಮಸ್ಯೆ ಮತ್ತು ಅಭಿವೃದ್ಧಿಯತ್ತ ನನ್ನ ಚಿತ್ತ ಎಂದರು.
ಮದ್ದೂರು ಕ್ಷೇತ್ರದಲ್ಲಿ ನಾನು ಜನಸಂರ್ಪಕ ಮಾಡುವ ವೇಳೆ ನೀರಾವರಿ ಇಳಾಖೆಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗಿ ನನ್ನ ಗಮನಕ್ಕೆ ಬಂದಿದ್ದು, ರೈತರ ಸಮಸ್ಯೆಗೆ ಸದಾ ಜತೆಗಿರುತ್ತೇನೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ನಾನು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ನಾನು ಹಿಡಿದ ಕೆಲಸ ಬಿಡುವುದಿಲ್ಲ. ಹೆಚ್ಚಿನದಾಗಿ ಜನರ ಸಮಸ್ಯೆಗೆ ಆದ್ಯತೆ ನೀಡುತ್ತೇ ನೆ. ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತಿದ್ದು, ಅವುಗಳನ್ನು ಬಗೆಹರಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರು ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿ ಉಳಿದ ವೇಳೆ ಗ್ರಾಮಗಳ ಅಭಿವೃದ್ಧಿ ಕಡೆ ಗಮನಹರಿಸಿ. ನಿಮ್ಮ ಗ್ರಾಮಗಳ ಅಭಿವೃದ್ಧಿಗೆ ನೇರವಾಗಿ ನನ್ನನ್ನು ಬೇಟಿ ಮಾಡಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ ಎಂದರು.
ಜಿಪಂ ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ಮಾಜಿ ಸದಸ್ಯ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ, ಗ್ರಾಪಂ ಅಧ್ಯಕ್ಷ ಅಜ್ಜಹಳ್ಳಿ ರಾಜೇಶ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಶಂಕರೇಗೌಡ, ಕಾವೇರಿ ನೀರಾವರಿ ನಿಗಮದ ಎಇಇ ಪ್ರಂಶಾಂತ್ ಲಿಂಗಯ್ಯ, ಜೆಇ ಅವಿನಾಶ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವರಿದ್ದರು.