

ಹಾಸನ: ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಂಡವಾಳ ಶಾಹಿಗಳ ವಿರುದ್ಧ ನಮ್ಮ ಹೋರಾಟ ನಡೆಯಲಿದ್ದು, ನಾನು ಮತ್ತು ಶ್ರೀನಿವಾಸ್ ಅವರು ಒಡಂಬಡಿಕೆಯಿಂದ ಚುನಾವಣೆ ಎದುರಿಸುತ್ತೇವೆ ಎಂದು ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ಶಿವಸ್ವಾಮಿ ಸ್ಪಷ್ಟಪಡಿಸಿದರು.
ಬಂಡವಾಳ ಶಾಯಿಗಳು ಚುನಾವಣೆಯಲ್ಲಿ ಹಣದ ಪ್ರಭಾವ ಬಳಸಿಕೊಂಡು ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಸಂಘಟನೆಯಿಂದ ಕೆಲಸ ಮಾಡಿಕೊಂಡು ಬಂದಿರುವ ನಾವಿಬ್ಬರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಮುಂದಾಗಿದ್ದು ಒಡಂಬಡಿಕೆಯಂತೆ ಎರಡು ವರ್ಷ ಶ್ರೀನಿವಾಸ್ ಅವರು ಉಳಿದ ಮೂರು ವರ್ಷ ನಾನು ಅಧ್ಯಕ್ಷರಾಗಿ ಮುಂದುವರೆಯುವ ತೀರ್ಮಾನ ಮಾಡಿದ್ದೇವೆ. ಈ ಬಗ್ಗೆ ಸುಮಾರು 45ಕ್ಕೂ ಹೆಚ್ಚು ಜನ ನಿರ್ದೇಶಕರು, ಅಧಿಕಾರಿಗಳು ಮತ್ತು ನೌಕರರ ಜತೆ ಚರ್ಚಿಸಿ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ ಶ್ರೀನಿವಾಸ್ ಮಾತನಾಡಿ, ಹಣಬಲ ಮತ್ತು ರಾಜಕೀಯ ಬಲದಿಂದ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಆದರೆ ಈ ಬಾರಿ ನೌಕರರು ಸ್ವಾಭಿಮಾನಕ್ಕೆ ಬೆಲೆ ನೀಡಲಿದ್ದಾರೆ. ಆದರೆ ರಾಜಕೀಯ ಪಕ್ಷದ ಮುಖಂಡರು ಹಣ ಮತ್ತು ರಾಜಕೀಯ ಪ್ರೇರಿತವಾಗಿ ಒತ್ತಡ ಹಾಕುವ ಮೂಲಕ ನಿರ್ದೇಶಕರಿಗೆ ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಬಗ್ಗೆ ಸಾಕಷ್ಟು ದೂರುಗಳಿದ್ದರೂ ಕೂಡ ನೌಕರರು ಮುಂದೆ ಬಂದು ಇದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ಈ ಬಾರಿ ಚುನಾವಣೆಯಲ್ಲಿ ಶಿವಸ್ವಾಮಿ ಮತ್ತು ನಾನು ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಮತ್ತು ನೌಕರರ ಬೇಡಿಕೆಗಳನ್ನ ಮತ್ತು ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.