ನಾನು ದಲಿತ ವಿರೋಧಿಯಲ್ಲ; ತಪ್ಪಾಗಿದ್ದರೆ ಕ್ಷಮೆ ಇರಲಿ: ಶಾಸಕ ಜಿ.ಟಿ.ದೇವೇಗೌಡ

chamundeshwari_ JDS_ G.T.Devegowda MLA
Published on

ಮೈಸೂರು: ನಾನು ದಲಿತ ವಿರೋಧಿಯಲ್ಲ. ನನ್ನ ಹೇಳಿಕೆಯಿಂದ ಪರಿಶಿಷ್ಟರಿಗೆ ನೋವಾಗಿದ್ದರೆ, ತಪ್ಪಾಗಿದ್ದರೆ ಕ್ಷಮೆ ಇರಲಿ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನನ್ನ ಇಷ್ಟು ವರ್ಷದ ರಾಜಕೀಯ, ಸಹಕಾರ ಜೀವನದಲ್ಲಿ ದಲಿತರು, ಹಿಂದುಳಿದ ವರ್ಗಗಳ ಸಮುದಾಯದ ಏಳಿಗೆಗೆ ಶ್ರಮಿಸಿದ್ದೇನೆಯೇ ಹೊರತು ಎಂದಿಗೂ ವಿರೋಧಿಯಾಗಿಲ್ಲ. ಇದೀಗ ಟೀಕಿಸುವವರು ನನ್ನ ಪಾಲಿನ ದೇವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸದನದಲ್ಲಿ ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ವಿಚಾರವಾಗಿ ಮಾತನಾಡುವಾಗ, ಸರ್ಕಾರ ಸಹಕಾರ ಸಂಘಗಳಿಗೆ ನಾಮನಿರ್ದೇಶನ ಮಾಡುವಾಗ ಮೂವರ ಬದಲಾಗಿ ನಾಲ್ಕು ಜನರನ್ನು ಮಾಡಿ ಎಂದು ಹೇಳಿದ್ದೇನೆ. ರಾಜ್ಯದಲ್ಲಿ ವಿವಿಧ ಸಹಕಾರ ಸಂಘಗಳು ಸೇರಿದಂತೆ ಸುಮಾರು 47 ಸಾವಿರ ಸಂಘಗಳಿವೆ.

ಇವುಗಳಲ್ಲಿ 15 ಸಾವಿರ ಸಂಘಗಳು ಮುಚ್ಚುವ ಸ್ಥಿತಿಯಲ್ಲಿವೆ. ಸರ್ಕಾರದಿಂದ ಇದೇ ರೀತಿ ಹಸ್ತಕ್ಷೇಪ ಮಾಡಿದರೆ ಇವುಗಳನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿದ್ದೇನೆ. ಆದರೆ, ಎಸ್‌ಸಿ-ಎಸ್‌ಟಿ ಮೀಸಲಾತಿ ಕುರಿತು ನಾನು ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದಾಗ್ಯೂ, ನನ್ನ ಹೇಳಿಕೆಯಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ. ನಾನು ಎಂದಿಗೂ ಜಾತಿವಾದಿಯಾಗಿಲ್ಲ. ದಲಿತರ ಪರವಾಗಿ ಕೆಲಸ ಮಾಡಿರುವೆ.

ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕಾಗಿ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವಂತೆ ಮಾಡಿದ್ದೆ. ಜಿಲ್ಲಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ದಲಿತ ಬಿ.ಪಿ.ನಂಜುಂಡಪ್ಪಸ್ವಾಮಿ ಅಧ್ಯಕ್ಷರಾಗಿ ಮಾಡುವ ಮೂಲಕ ನಾನು ಏನು ಎಂಬುದನ್ನು ಸಾಬೀತುಪಡಿಸಿರುವೆ ಎಂದರು.

ಸಂವಿಧಾನ, ಅಂಬೇಡ್ಕರ್, ದಲಿತರಿಗೆ ಎಂದಿಗೂ ಅಗೌರವ ತೋರಿಲ್ಲ. ದಲಿತರೊಂದಿಗೆ ಜೀವನ ನಡೆಸಿರುವೆ. ಅವರನ್ನು ಪ್ರೀತಿಯಿಂದ ಕಂಡಿರುವೆ. ನಾನು ದಲಿತ ವಿರೋಧಿಯಾಗಿದ್ದರೆ ಇಷ್ಟು ದಿನ ಶಾಸಕರಾಗಿ ಗೆಲ್ಲಲು ಹೇಗೆ ಸಾಧ್ಯ? ನನ್ನ ಮಗ ಹರೀಶ್‌ಗೌಡ ಹುಣಸೂರು ಕ್ಷೇತ್ರ ಶಾಸಕರಾಗಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದರು.

ಧರ್ಮಸ್ಥಳ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ನೇಣು ಹಾಕಿ

ಧರ್ಮಸ್ಥಳ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇದರೊಂದಿಗೆ ಧರ್ಮಸ್ಥಳ ಕ್ಷೇತ್ರ ಕುರಿತು ಕೇಳಿ ಬರುತ್ತಿರುವ ಮಾತುಗಳಿಗೂ ಇತಿಶ್ರೀ ಹಾಡಬೇಕು. ಯಾರೇ ತಪ್ಪು ಮಾಡಿದ್ದರೂ ಅವರನ್ನು ನೇಣು ಹಾಕಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಈ ಪ್ರಕರಣದಿಂದ ರಾಜ್ಯದ ಜನರಿಗೆ ನೋವಾಗಿದೆ. ಎಸ್‌ಐಟಿ ರಚಿಸಬಾರದಿತ್ತು. ಆದರೆ, ಈಗಾಗಲೇ ನೇಮಕವಾಗಿರುವ ತಂಡದಿಂದ ತನಿಖೆ ನಡೆಸಿ ಪ್ರಕರಣವನ್ನು ಮುಕ್ತಾಯಗೊಳಿಸಿ ನಾಡಿನ ಜನರಿಗೆ ನೆಮ್ಮದಿ ಕೊಡಬೇಕು. ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳ ಯಾವುದೇ ಕಾರಣಕ್ಕೂ ಗುರಿ ಮಾಡಲು ಆಗಲ್ಲ. ಸತ್ಯ ಹೊರಬರುತ್ತದೆ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎಂದರು.

ನಂಬಿಕೆ ಇದ್ದರೆ ದಸರಾ ಉದ್ಘಾಟಿಸುತ್ತಾರೆ

ನಾಡಿನ ಅಧಿದೇವತೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ದರೆ ಸಾಹಿತಿ ಬಾನು ಮುಷ್ತಾಕ್ ದಸರಾವನ್ನು ಉದ್ಘಾಟನೆ ಮಾಡುತ್ತಾರೆ. ನಂಬಿಕೆ ಇಲ್ಲ ಅಂದರೆ ಅವರು ಬರುವುದೇ ಇಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿದರು.

ಹಿಂದೆ ಕೂಡ ಕೆ.ಎಸ್.ನಿಸಾರ್ ಅಹಮ್ಮದ್ ಅವರು ದಸರಾವನ್ನು ಉದ್ಘಾಟಿಸಿದ್ದರು.

ಕೆಲವರು ಆ ಅಧ್ಯಯನ, ಈ ಅಧ್ಯಯನ ಎನ್ನುತ್ತಾ ಮಾತನಾಡುತ್ತಾರೆ. ನಮಗೆ ಅದ್ಯಾವುದು ಗೊತ್ತಾಗಲ್ಲ. ಏಕೆಂದರೆ ಹಗಲು-ರಾತ್ರಿ ನಾನು ಯಾವಾಗಲೂ ಕಾರ್ಯಕರ್ತರ ಜತೆಯಲ್ಲೇ ಇರುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತನೆ ನಡೆಸುತ್ತಿದ್ದು, ಈ ವಿಷಯಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net