

ಮೈಸೂರು: ಆರು ಬಾರಿ ನನ್ನ ಜನ ನನ್ನನ್ನು ಗೆಲ್ಲಿಸಿದ್ದಾರೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬಕ್ಕೆ ಸುದೀರ್ಘ ರಾಜಕೀಯ ಇತಿಹಾಸ ಇದೆ. ಕಳೆದ ಬಾರಿಯೇ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು.
ಕಳೆದ ಬಾರಿ ಯಾವ ಕಾರಣಕ್ಕೆ ಕೈ ತಪ್ಪಿತೊ ಗೊತ್ತಿಲ್ಲ. ಈಗ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಸಚಿವ ಸ್ಥಾನ ಕೊಡಿ ಎಂದು ಯಾರ ಬಳಿ ಕೇಳಿಲ್ಲ. ಪಕ್ಷದ ಹೈಕಮಾಂಡ್ ಮೇಲೆ ನಂಬಿಕೆ ಇದೆ. ಕಳೆದ ಬಾರಿ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಈ ಬಾರಿಯೂ ಇದೇ ಅನ್ನಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಡಲು ಬಂದರು. ಬೇಡ ಎಂದು ಈ ಹಿಂದೆ ಹೇಳಿದ್ದೆ. ಈ ಬಾರಿ ಕೆಲ ಸಚಿವರನ್ನು ಕೈ ಬಿಡುತ್ತಾರೆ ಎಂಬ ಸುದ್ದಿ ಮಾಧ್ಯಮದಲ್ಲಿ ಬರುತ್ತಿದೆ. ಸಚಿವ ಜಮೀರ್ ಅವರನ್ನು ತೆಗೆದು ನನಗೆ ಕೊಡ್ತಾರೆ ಅಂದುಕೊಂಡಿಲ್ಲ.
ನನಗೆ ಅವಕಾಶ ಇದ್ದಾಗ ನನಗೆ ಸಿಕ್ಕೇ ಸಿಗುತ್ತೆ. ಅಲ್ಪಸಂಖ್ಯಾತ ಕೋಟಾದಲ್ಲಿ ಕೇವಲ ಎರಡು ಸ್ಥಾನ ನೀಡಿದ್ದಾರೆ. ಅಲ್ಪಸಂಖ್ಯಾತರಿಗೆ ಮೂರು ಸ್ಥಾನ ಕೊಡಿ ಎಂದು ಮನವಿಯಷ್ಟೆ. ಯಾರನ್ನೂ ತೆಗೆದು ನನಗೆ ಕೊಡಿ ಎಂದು ನಾನು ಕೇಳಲ್ಲ. ಈ ಬಾರಿ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲವಾದರೆ ಜನರ ಸೇವೆ ಮಾಡ್ತೀನಿ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊಡ್ಡದು. ಅದನ್ನು ನಿಭಾಯಿಸುವ ಸಮಯ ಮತ್ತು ಶಕ್ತಿ ನನಗಿಲ್ಲ. ಡಿ.ಕೆ.ಶಿವಕುಮಾರ್ ಬಿಟ್ಟರೆ ಬೇರೆಯವರು ಅದಕ್ಕೆ ಅರ್ಹರಲ್ಲ. ಅವರ ಶ್ರಮ, ಕಾರ್ಯ ಅತಿ ಹೆಚ್ಚಿನದು. ನನಗೆ ಸಚಿವ ಸ್ಥಾನ ಕೊಟ್ಟರಷ್ಟೇ ನಿಭಾಯಿಸುತ್ತೇನೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಚುನಾವಣಾ ರಾಜಕಾರಣದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಸೆ ಆಯಸ್ಸಿಗಿಂತ ಹೆಚ್ಚಿನದು. ಸಿಎಂ ಬದಲಾವಣೆ ವರಿಷ್ಠರು ತೆಗೆದುಕೊಳ್ಳುವ ವಿಚಾರ. ಪಕ್ಷದ, ರಾಜ್ಯದ ಬೆಳವಣಿಗೆಗೆ ವರಿಷ್ಠರು ಏನು ತೀರ್ಮಾನ ಮಾಡ್ತಾರೋ ಆ ನಿರ್ಧಾರಕ್ಕೆ ಬದ್ಧ. ಬದಲಾವಣೆ ವಿಚಾರ ಬಂದಾಗ ನಾವು ಎಲ್ಲದಕ್ಕೂ ಸಿದ್ಧರಿರಬೇಕು. ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಅವರನ್ನು ಕಿತ್ತುಹಾಕಿ ಅಂತಲೂ ನಾನು ಹೇಳಲ್ಲ ಎಂದು ಹೇಳಿದರು.
ಐದು ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರ ಲೋಕಸಭಾ ಚುನಾವಣಾ ಸಮಯ ಸಾಕಷ್ಟು ಚರ್ಚೆ ಆಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಸಿದ್ದರಾಮಯ್ಯ ಅವರು ವಿತ್ತ ಸಚಿವರಾಗುತ್ತಾರೆ ಎಂಬ ಚರ್ಚೆಯೂ ಇತ್ತು. ಆದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಹೀಗಾಗಿ ಸಿಎಂ ಆಗಿ ರಾಜ್ಯದಲ್ಲಿ ಮುಂದುವರಿದಿದ್ದಾರೆ. ಸದ್ಯ ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧ ಎಂದರು
ಮುಡಾದಲ್ಲಿ ನನ್ನ ಒಂದೇ ಒಂದು ಸೈಟ್ ಇಲ್ಲ. ದುರಾಸೆ ಇಟ್ಟುಕೊಂಡು ನಾನು ರಾಜಕಾರಣ ಮಾಡಿಲ್ಲ. ಈಗಾಗಲೇ ಮೂರು ದಿಕ್ಕಿನಿಂದಲೂ ಮುಡಾ ತನಿಖೆ ನಡೆಯುತ್ತಿದೆ. ನಾನು ಈ ಹಿಂದೆಯೇ ಹೇಳಿದ್ದೆ, ಮುಡಾದ 50:50 ಅನುಪಾತದಡಿ ಕೊಟ್ಟಿರುವ ಸೈಟ್‌ಗಳನ್ನು ವಾಪಸ್ ಪಡೆಯಬೇಕು, ಇಲ್ಲವೇ ಎಲ್ಲ ಸೈಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಅಂತ. ತನಿಖೆ ನಂತರ ಅರ್ಹರಿಗೆ ಗೌರವವಾಗಿ ಸೈಟ್ ಕೊಡಬೇಕು ಎಂದು ಮತ್ತೆ ಆಗ್ರಹಿಸಿದರು.
ರಾಜಕಾರಣಿಗಳ ವಿರುದ್ಧವೂ ಆರೋಪ ಕೇಳಿ ಬರುತ್ತಿದೆ. ಮುಂದೆ ತನಿಖೆಯಿಂದ ಏನಾಗುತ್ತದೆಯೋ ಗೊತ್ತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ತನಿಖೆ ಮುಗಿದ ಬಳಿಕ ಸಮಪರ್ಕವಾಗಿದ್ದರೆ ಅವರಿಗೆ ವಾಪಸ್ ನೀಡಲಿ. ಮುಡಾದಲ್ಲಿ ನಕ್ಷೆ ಅನುಮೋದನೆ, ನಿವೇಶನ ಬಿಡುಗಡೆ ಜವಾಬ್ದಾರಿ ಇದೆ.
ನಿವೇಶನಕ್ಕೆ ಜಮೀನು ವಶಪಡಿಸಿಕೊಳ್ಳುವುದನ್ನು ಸರಿಯಾಗಿ ಮಾಡಿಲ್ಲ. ಕಂದಾಯ, ಖಾತೆ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಪಾಲಿಕೆ ವ್ಯಾಪ್ತಿಯ ದುಪ್ಪಟ್ಟು ನಿವೇಶನ ಪ್ರಾಧಿಕಾರದಿಂದ ಹಂಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಡಾ ಸಭೆಯಲ್ಲಿ ಸಿಎಂ ಪತ್ನಿ ಅಂತ ವಿಷಯ ಬರಲಿಲ್ಲ. ನನಗಾಲಿ, ಯಾರಿಗಾಗಲಿ ಸಿಎಂ ಫೋನ್ ಮಾಡಿ ಹೇಳಿರಲಿಲ್ಲ. ಆದರೆ, ಅಂದಿನ ಅಧ್ಯಕ್ಷರು, ಆಯುಕ್ತರು ಪಾರ್ವತಿ ಅಂತ ಫೈಲ್ ಇಟ್ಟಿದ್ದರು. ಆ ಸಭೆಯಲ್ಲಿ ನನ್ನದು, ಎಸ್.ಎ.ರಾಮದಾಸ್ ಅವರ ವಿರೋಧವಿತ್ತು. ವಿರೋಧದ ನಡುವೆಯೇ ಪಾಸ್ ಮಾಡಿದ್ದರು. ನಾನು ನನ್ನ ಜನಕ್ಕೆ ಮೋಸ ಮಾಡಿಲ್ಲ. ಆ ಸಭೆಯಲ್ಲಿ ನಾವು ವಿರೋಧ ಮಾಡಿದ್ದ ಧ್ವನಿಸುರುಳಿ ಹೊರಬಂದಿತ್ತು ಎಂದು ಹೇಳಿದರು.
ರಾಜಕಾರಣ ಮಾಡುವವರು ಬೇರೆ ವ್ಯವಹಾರ ಮಾಡಬಾರದು ಅಂತಲ್ಲ. ಎಲ್ಲವನ್ನೂ ಕ್ರಮಬದ್ಧವಾಗಿ ಮಾಡಬೇಕು. ಬೇನಾಮಿ ಎಂಬುದನ್ನು ನಾನು ಒಪ್ಪಲ್ಲ. ಯಾವುದೇ ಅರ್ಜಿ ಬಂದಾಗ ಮಾಡಲೇಬೇಕು ಅಂತ ಮಾಡಿಲ್ಲ. ಆದರೆ, ಕ್ರಮಬದ್ಧವಾಗಿದ್ದರೆ ಮಾಡಿ ಎಂದು ಶಿಫಾರಸು ಮಾಡಿರುವೆ. ಕಾನೂನುಬದ್ಧವಾಗಿದ್ದರೆ ಅಧಿಕಾರಿಗಳು ಮಾಡಬೇಕು. ಕಾನೂನು ಮೀರಿ ಸ್ವಾರ್ಥಕ್ಕೆ ಮಾಡಿಕೊಂಡಿದ್ದರೆ ತಪ್ಪು ಎಂದರು.