

ಕೊಳ್ಳೇಗಾಲ : ನಾಡು, ನುಡಿ ವಿಚಾರದಲ್ಲಿ ಧಕ್ಕೆ ಆಗದಂತೆ ಮಾದರಿ ಜೀವನ ನಡೆಸಬೇಕು ಎಂದು ಶಾಸಕ ಎ.ಆರ್.ಕ್ಷಷ್ಣ ಮೂರ್ತಿ ಹೇಳಿದರು.
ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಹೋರಾಟದ ಫಲ: ಕರ್ನಾಟಕ ಏಕೀಕರಣವು ಹಲವರ ಹೋರಾಟದ ಫಲವಾಗಿದೆ. 1973ರಲ್ಲಿ ದೇವರಾಜ್ ಅರಸು ಸಿಎಂ ಆಗಿದ್ದ ಸಂದರ್ಭ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. 4 ಪ್ರಾಂತ್ಯವಾಗಿದ್ದ ನಾಡು ಏಕೀಕರಣಗೊಂಡು ಇದೀಗ 50 ವರ್ಷವಾಗಿದೆ. ಈ ಸಂದರ್ಭ ನೆಲ, ಜಲ, ಭಾಷೆ ಸೇರಿ ನಾಡಿನ ಯಾವುದೇ ವಿಚಾರಕ್ಕೆ ಧಕ್ಕೆ ಬಂದರೆ ಒಗ್ಗೂಡಿ ಹೋರಾಟ ಮಾಡಬೇಕು ಎಂದರು.
ಧ್ವಜಾರೋಹಣ: ರಾಷ್ಟ್ರ ಧ್ವಜವನ್ನು ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ಕನ್ನಡ ಧ್ವಜವನ್ನು ತಹಸೀಲ್ದಾರ್ ಬಸವರಾಜು ಆರೋಹಣ ಮಾಡಿದರು.
ಬಳಿಕ ಪೊಲೀಸ್, ಗೃಹ ರಕ್ಷಕದ ದಳ ತುಕಡಿ, ಶಾಲಾ ಮಕ್ಕಳಿಂದ ಧ್ವಜ ವಂದನೆ ನೆರವೇರಿತು. ದೇಶ, ರಾಜ್ಯ ಪ್ರೇಮವನ್ನು ಸಾರುವ ಸಾಂಸ್ಕೃ ತಿಕ ಕಾರ್ಯಕ್ರಮಗಳು ಗಮನ ಸೆಳೆದವು. ನಿವೃತ್ತ ಉಪನ್ಯಾಸಕಿ ಸರಸ್ವತಿ ಹೊನ್ನಪ್ಪ ಅವರು ಕನ್ನಡ ಭಾಷೆ, ನೆಲ, ಜಲ ಕುರಿತು ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಿ.ವಿ ಪ್ರಜನ್ ಹಾಗೂ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಕಸಾಪ ಅಧ್ಯಕ್ಷ ನಾಗರಾಜು, ತಾಪಂ ಇಒ ಗುರು ಶಾಂತಪ್ಪ, ಪೌರಾಯುಕ್ತ ರಮೇಶ್, ಬಿಇಒ ಮಂಜುಳಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು ಇತರರು ಇದ್ದರು.