ನಾಡು, ನುಡಿಗೆ ಸಾಹಿತಿಗಳ ಕೊಡುಗೆ ಅಪಾರ

MDG sahitya
ಮೂಡಿಗೆರೆಯಲ್ಲಿ ಕನ್ನಡ ಸಾಹಿತ್ಯ ಸಂಭ್ರಮ ವೇದಿಕೆಯಿಂದ ಸಾಹಿತ್ಯ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆ ಅಧ್ಯಕ್ಷ ಎಂ.ಎಸ್.ನಾಗರಾಜ್, ಮಂಜುನಾಥ ಸ್ವಾಮಿ, ಬಿ.ಆರ್.ನವೀನ್, ಈಶನಗೌಡ ಪಾಟೀಲ್, ಶಕುಂತಲಾ, ದಾಕ್ಷಾಯಿಣಿ, ಅನುರಾಧಾ, ನವೀನ್ ಆನೆದಿಬ್ಬ, ಬಕ್ಕಿ ರವಿ, ಕಮಲಾ ಇತರರಿದ್ದರು.
Published on

ಮೂಡಿಗೆರೆ: ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗ ಸಾಹಿತ್ಯದ ಮೂಲಕ ಉತ್ತರ ನೀಡಿದ ರಾಜ್ಯದ ಬಹುತೇಕ ಸಾಹಿತಿಗಳು, ನಾಡು, ನುಡಿಯನ್ನು ಬೆಳೆಸಲು ಬಹುದೊಡ್ಡ ಹೋರಾಟ ನಡೆಸಿದ್ದಾರೆ ಎಂದು ಕನ್ನಡ ಸಾಹಿತ್ಯ ಸಂಭ್ರಮ ವೇದಿಕೆ ಅಧ್ಯಕ್ಷ ಎಂ.ಎಸ್.ನಾಗರಾಜ್ ಹೇಳಿದರು.

ಪಟ್ಟಣದಲ್ಲಿ ಶಿಕ್ಷಕ ದಂಪತಿ ಈಶನಗೌಡ ಪಾಟೀಲ್ ಮತ್ತು ಶಕುಂತಲಾ ಅವರ ಮನೆಯಂಗಳದಲ್ಲಿ ಶನಿವಾರ ಸಂಜೆ ನಡೆದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳಗಾವಿ ಗಡಿಯಲ್ಲಿ ನಿರಂತರವಾಗಿ ಕನ್ನಡದ ಮೇಲೆ ಸವಾರಿ ನಡೆಯುತ್ತಿದೆ. ದೌರ್ಜನ್ಯ ನಡೆಸುವವರ ವಿರುದ್ಧ ಕನ್ನಡಿಗರು ಹೋರಾಟ ನಡೆಸಿ ದೌರ್ಜನ್ಯ ತಡೆಗಟ್ಟದಿದ್ದರೆ ರಾಜ್ಯದ ಸಂಪತ್ತನ್ನು ಕಬಳಿಸಲು ಹೊಂಚು ಹಾಕಿ ಕುಳಿತವರ ಕೈಮೇಲಾಗಲಿದೆ. ಹೋರಾಟದ ಮೂಲಕ ಕನ್ನಡನಾಡಿನ ಗೌರವಕ್ಕೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಿರುವ ಕನ್ನಡ ಸಂಘಟನೆಗಳ ಕಾರ್ಯಕರ್ತರು ಜೀವವನ್ನು ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾರೆ. ನಮ್ಮ ನಾಡಿನ ಸಾಹಿತ್ಯ, ಸಂಸ್ಕೃತಿ, ನೆಲ, ಜಲ ಮತ್ತು ಪರಂಪರೆಯನ್ನು ಕಂಡು ಸಹಿಸಿಕೊಳ್ಳಲಾರದ ಕೆಲ ವಿಕೃತ ಮನಸ್ಸಿನ ವ್ಯಕ್ತಿಗಳು ನೆಲ, ಜಲ ವಿಚಾರವಾಗಿ ನಿರಂತರವಾಗಿ ಸವಾರಿ ನಡೆಸುತ್ತಿದ್ದಾರೆ. ಇಂಥ ಸವಾರಿ ತಡೆಗಟ್ಟಲು ಕನ್ನಡ ಸಂಘಟನೆಗಳಿಗೆ ಶಕ್ತಿಯಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಷ್ಟ್ರಕವಿ ಕುವೆಂಪು, ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಯು.ಆರ್.ಅನಂತಮೂರ್ತಿ ಸೇರಿದಂತೆ ಹಲವಾರು ಸಾಹಿತಿಗಳಿಂದಾಗಿ ರಾಜ್ಯದ ಏಕತೆ ಮತ್ತು ಅಖಂಡತೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ. ಕನ್ನಡ ಸಾಹಿತ್ಯದ ಕೃಷಿ ನಡೆಸುವ ಸಾಹಿತಿಗಳು ಹೃದಯ ಶ್ರೀಮಂತಿಕೆ ಮೂಲಕ ದೊಡ್ಡವರಾಗಿದ್ದಾರೆ. ಇಂಥ ಬಹುದೊಡ್ಡ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯಕ್ಕೆ ಅಗಾಧ ಸಾಮರ್ಥ್ಯವಿದೆ. ನಾಡನ್ನು ಉಳಿಸಿಕೊಳ್ಳುವ ಶಕ್ತಿಯಿದೆ ಎಂದು ತಿಳಿಸಿದರು.

ಮಲೆನಾಡಿನ ಪ್ರತಿ ಮನೆ, ಮನ, ಜಮಿನು ಸೇರಿದಂತೆ ಎಲ್ಲೆಲ್ಲಿ ಹುಡುಕಿದರೂ ಅಲ್ಲೆಲ್ಲ ಸಾಹಿತ್ಯ ಚಿಗುರುತ್ತದೆ. ರಾಷ್ಟ್ರಕವಿ ಕುವೆಂಪು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಕೃತಿಯಲ್ಲಿ ಮಲೆನಾಡಿನ ಪ್ರಕೃತಿಯನ್ನು ವಿನೂತನ ರೀತಿಯಲ್ಲಿ ವರ್ಣಿಸಿದ್ದಾರೆ. ಅವರ ವರ್ಣನೆಗೆ ಮನಸೋತ ಅನೇಕರು ಕವಿಗಳಾಗಿದ್ದಾರೆ. ನಾಡಿನ ಸಂಸ್ಕೃತಿ, ಪರಂಪರೆ ಉಳಿಸಲು ಪ್ರತಿದಿನ ಲೇಖನಿಯಲ್ಲಿ ಸಾಹಿತ್ಯವೆಂಬ ಸುಂದರ ಚಿತ್ರ ಬಿಡಿಸುತ್ತಿದ್ದಾರೆ. ಮಲೆನಾಡಿನ ಕಾಫಿ ತೋಟದ ಹಸಿರಿನ ಸೌಂದರ್ಯ ಕಣ್ತುಂಬಿಕೊಂಡು ಕನ್ನಡದ ಸಾರ್ವಭೌಮತ್ವವನ್ನು ಇನ್ನಷ್ಟು ಹಸಿರಾಗಿಸಬಹುದಾಗಿದೆ ಎಂದು ಕನ್ನಡ ಜ್ಞಾನ ವಿಜ್ಞಾನ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ ತಿಳಿಸಿದರು.

ಕನ್ನಡ ಸಾಹಿತ್ಯ ಸಂಭ್ರಮ ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ.ಆರ್.ನವೀನ್, ದಾಕ್ಷಾಯಿಣಿ, ಕೆ.ವಿಸುರೇಶ್ ಗೌಡ, ಕಮಲಾ, ಪ್ರಕಾಶ್, ವಿಶಾಲ್ ಗೌಡ ಪಾಟೀಲ್, ಬಕ್ಕಿ ರವಿ, ಸೋನು, ನವೀನ್ ಆನೆದಿಬ್ಬ, ಮೈಸೂರಿನ ಅನುರಾಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net