ನಾಡು, ನುಡಿಗಾಗಿ ಒಗ್ಗಟ್ಟು ಪ್ರದರ್ಶಿಸಿ

kdr kasapa
ಕಡೂರು ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಅಧಿಕಾರ ಸ್ವೀಕರಿಸಿದರು. ಭಂಡಾರಿ ಶ್ರೀನಿವಾಸ್, ಸೂರಿ ಶ್ರೀನಿವಾಸ್, ಬಿ.ಶಿವಕುಮಾರ್, ಸವಿತಾ ರಮೇಶ್, ಪ್ರಕಾಶ್, ಸಿಂಗಟಗೆರೆ ಸಿದ್ದಪ್ಪ ಇತರರಿದ್ದರು.
Published on

ಕಡೂರು: ಕನ್ನಡದ ಕಾಯಕಕ್ಕೆ ಕೈಜೋಡಿಸಲು ಕನ್ನಡದ ಮನಸ್ಸುಗಳು ಒಗ್ಗೂಡಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಬುಧವಾರ ಕಸಾಪ ತಾಲೂಕು ಘಟಕದಿಂದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಕಸಾಪವನ್ನು ಉತ್ತೇಜಿಸುವ ಕನ್ನಡದ ಮನಸ್ಸುಗಳು ಒಗ್ಗೂಡಿದಾಗ ಸಾಹಿತ್ಯ ಪರಿಷತ್ ಮತ್ತಷ್ಟು ವೃದ್ಧಿಗೊಳ್ಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ತಾಯಿ ಭುವನೇಶ್ವರಿ ದೇವಿ ಪುತ್ಥಳಿ ನಿರ್ಮಾಣಕ್ಕಾಗಿ ಪುರಸಭೆಯಿಂದ ಸೂಕ್ತ ಜಾಗದ ವ್ಯವಸ್ಥೆ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿಯೂ ಕನ್ನಡದ ಕೆಲಸಕ್ಕೆ ಪುರಸಭೆ ಹಾಗೂ ನಮ್ಮ ಬೆಂಬಲ ನಿರಂತರವಾಗಿರಲಿದೆ. ನೂತನ ಅಧ್ಯಕ್ಷರು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವ ಮೂಲಕ ತಾಲೂಕು ಘಟಕವನ್ನು ಹೆಚ್ಚು ಸಕ್ರಿಯಗೊಳಿಸಬೇಕಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಾಹಿತ್ಯದ ಅಭಿರುಚಿ ಜತೆಗೆ ಯುವ ಮನಸ್ಸುಗಳನ್ನು ಬೆಳೆಸಲು ಪರಿಷತ್ ಮುಂದಾಗುತ್ತಿದೆ. ಜಿಲ್ಲೆಯಲ್ಲಿ ಮಹಿಳಾ ಘಟಕಗಳು ರಚನೆಗೊಳಿಸಿ ಮಹಿಳೆಯರಿಗಾಗಿಯೇ ಜಿಲ್ಲೆಯಿಂದ ವೇದಿಕೆ ಕಲ್ಪಿಸಲಾಗಿದೆ. ಇರುವ ಅವಧಿಯಲ್ಲಿ ನಾವೆಷ್ಟು ಕನ್ನಡಕ್ಕಾಗಿ ಕಾರ್ಯನಿರ್ವಹಿಸಿದ್ದೇವೆ ಎಂಬುದು ಮುಖ್ಯವಾಗಲಿದೆ. ಜಿಲ್ಲಾ ಹಂತದಿಂದ ಗ್ರಾಮೀಣ ಮಟ್ಟದವರೆಗೆ ಪರಿಷತ್ ಘಟಕಗಳು ರಚನೆಗೊಳಿಸಲಾಗಿದೆ. ಪಟ್ಟಣದಲ್ಲಿರುವ ಕನ್ನಡಭವನದ ನಿರ್ವಹಣೆಗಾಗಿಯೇ ಸಮಿತಿ ರಚಿಸಿಕೊಂಡು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ನೂತನ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಅವರಿಗೆ ಕನ್ನಡಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಬಿ.ಶಿವಕುಮಾರ್, ಜಿಲ್ಲಾ ಕೋಶಾಧ್ಯಕ್ಷ ಬಿ.ಪ್ರಕಾಶ್, ಎಸ್.ಎಸ್.ವೆಂಕಟೇಶ್, ಎಂ.ರಾಜಪ್ಪ, ಸವಿತಾ ರಮೇಶ್, ಶೂದ್ರ ಶ್ರೀನಿವಾಸ್, ಎನ್.ಎಚ್.ನಂಜುಂಡಸ್ವಾಮಿ, ಜಿಗಣೇಹಳ್ಳಿ ನೀಲಕಂಠಪ್ಪ, ಹೋಬಳಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net