ನಾಡಿನ ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

CTD VISHWAKARMA---------..
Published on

ಚಿತ್ರದುರ್ಗ: ವಿಶ್ವ ಪಾರಂಪರಿಕ ತಾಣಗಳೆಂದು ಗುರುತಿಸಿರುವ ಹೊಯ್ಸಳರ ಕಾಲದ ಬೇಲೂರು, ಹಳೇಬಿಡು, ವಿಜಯನಗರ ಸಾಮ್ರಾಜ್ಯದ ಹಂಪಿ ದೇವಾಲಯ ಗಳಂಥ ಅದ್ಭುತ ದೇಗುಲಗಳನ್ನು ನಿರ್ಮಿಸುವ ಮೂಲಕ ವಿಶ್ವಕರ್ಮರು ನಾಡಿನ ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಎಂಎಲ್‌ಸಿ ಕೆ.ಎಸ್. ನವೀನ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಮೂರ್ತಿಯನ್ನು ಸಿದ್ಧಪಡಿಸಿದ ಅರುಣ್‌ಯೋಗಿರಾಜ್ ಸೇರಿ ರಾಜ್ಯಶಿಲ್ಪ ಕಲಾಕಾರರು ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ವಿನಯ್‌ಕಾಳಚಾರ್ ಅಮೆರಿಕದ ವಾಷಿಂಗ್ಟ್‌ನ್‌ನಲ್ಲಿ 20 ಅಡಿ ಎತ್ತರದ ಕನ್ನಡ ಭುವನೇಶ್ವರಿ ಶಿಲ್ಪಕಲಾ ಮೂರ್ತಿ ಕೆತ್ತನೆ ಮಾಡಿ ಕನ್ನಡದ ಸೊಬಗನ್ನು ಬಿಂಬಿಸಿದ್ದಾರೆ.

ಸಾವಿರಾರು ವರ್ಷಗಳ ವಾಸ್ತುಶಿಲ್ಪ ಕಲೆಯನ್ನು ಇಂದಿಗೂ ವಿಶ್ವಕರ್ಮರು ಜೀವಂತ ಇರಿಸಿದ್ದಾರೆ. ಪ್ರಸ್ತುತ ವಿಶ್ವಕರ್ಮ ಸಮುದಾಯದವರು ಆಧುನಿಕ ಶಿಕ್ಷಣದ ಜತೆಗೆ ಮೂಲ ಕುಲಕಸುಬುಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ವಿಶ್ವಕರ್ಮ ಎಂದರೆ ಕೇವಲ ಜಾತಿ ಸೂಚಕವಲ್ಲ, ನಾನಾ ಕುಲವೃತ್ತಿಗಳನ್ನು ಪರಂಪರಾಗತವಾಗಿ ಮಾಡುತ್ತ ಬಂದಿರುವ ಹಲವು ಜಾತಿಗಳ ಗುಂಪಾಗಿದೆ.

ಮನೆ, ಮರದ ವಸ್ತುಗಳು, ಲೋಹದ ವಸ್ತುಗಳು, ಕಲ್ಲಿನ ದೇವರ ಮೂರ್ತಿಗಳನ್ನು ಸಹ ನಿರ್ಮಿಸಿ ನಮ್ಮೆಲ್ಲರ ಜೀವನಕ್ಕೆ ಅರ್ಥ ಕಲ್ಪಿಸಿದ ಕಾಯಕ ಜೀವಿಗಳೆಲ್ಲರು ವಿಶ್ವಕರ್ಮ ಸಮುದಾಯಕ್ಕೆ ಸೇರುತ್ತಾರೆ ಎಂದು ನವೀನ್ ಹೇಳಿದರು.

ತಹಸೀಲ್ದಾರ್ ಗೋವಿಂದರಾಜ್ ಮಾತನಾಡಿ, ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಮಹನೀಯರ ತತ್ವ, ಆದರ್ಶಗಳನ್ನು ಪಾಲನೆ ಮಾಡಬೇಕು. ವಿಶ್ವಕರ್ಮ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಚನ್ನಗಿರಿ ತಾಲೂಕು ವಡ್ನಾಳ್ ಶ್ರೀಮದ್ ಜಗದ್ಗುರು ವಿಶ್ವಕರ್ಮ ಮಹಾ ಸಂಸ್ಥಾನದ ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿದರು.

ನಿವೃತ್ತ ಶಿಕ್ಷಕ ಕೆ.ಪಿ. ರವೀಂದ್ರನಾಥಾಚಾರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಂಗವಾಗಿ ನಗರದ ಬುರುಜನಹಟ್ಟಿ ಕೋಟೆ ಆಂಜನೇಯ ದೇವಸ್ಥಾನ ಬಳಿ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಎಸಿ ಮೆಹಬೂಬ್ ಜಿಲಾನಿ ಖುರೇಷಿ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವರು.

ಆಂಜನೇಯ ದೇಗುಲದಿಂದ ಆರಂಭವಾದ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ ಮಾರ್ಗ ಆನೆಬಾಗಿಲು ಮೂಲಕ ಸಂಚರಿ ಸಿ, ಕಾಳಿಕಾಂಬ ಕಲ್ಯಾಣ ಮಂಟಪವನ್ನು ತಲುಪಿತು. ಉಮೇಶ್ ಪತ್ತಾರ ತಂಡ ಗೀತಗಾಯನ ನಡೆಸಿಕೊಟ್ಟಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿಶ್ವಕರ್ಮ ಸಮುದಾಯದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.

ಸಿಇಎನ್ ಡಿವೈಎಸ್‌ಪಿ ಉಮೇಶ್ ಈಶ್ವರ್‌ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಟಿ. ಸುರೇಶಾಚಾರ್, ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ ಟ್ರಸ್ಟ್ ಎ. ಶಂಕರಾಚಾರ್ ಇತರರು ಇದ್ದರು.

ಕೋಟ್

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವಿಶ್ವಕರ್ಮ ಸಮಾಜ ಬೆಂಬಲವಾಗಿ ನಿಲ್ಲಬೇಕು. ಸಮೀಕ್ಷೆಯಲ್ಲಿ ರಾಷ್ಟ್ರೀಯತೆ ಕಾಲಂನಲ್ಲಿ ಭಾರತೀಯ ಎಂದು, ಧರ್ಮದ ಕಾಲಂನಲ್ಲಿ ಹಿಂದು, ಜಾತಿ ವಿಶ್ವಕರ್ಮ, ಪ್ರವರ್ಗ-2ಎ ಎಂದು ನಮೂದಿಸ ಬೇಕು.

ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀಮದ್ ಜಗದ್ಗುರು ವಿಶ್ವಕರ್ಮ ಮಹಾ ಸಂಸ್ಥಾನ, ವಡ್ನಾಳ್, ಚನ್ನಗಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net