ನಾಡಿನ ಅಭಿವೃದ್ಧಿಗೆ ಶಿಕ್ಷಣ ಮುನ್ನುಡಿ

16 02
Published on

ಕೆಬಿಜೆ ಅಭಿನಂದನಾ ಗ್ರಂಥ ಶಿಕ್ಷಣ ಶ್ರೀನಿಧಿ ಲೋಕಾರ್ಪಣೆ, ಸಚಿವ ಡಾ.ಜಿ.ಪರಮೇಶ್ವರ ಅಭಿಮತ

ತುಮಕೂರು: ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಬೀಜವನ್ನು ಬಿತ್ತಿದ್ದು ಸಿದ್ಧಗಂಗಾ ಶ್ರೀಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ನಗರದ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕೆ.ಬಿ.ಜಯಣ್ಣ ಅವರ ಅಭಿನಂದನೆ ಹಾಗೂ ಶಿಕ್ಷಣ ಶ್ರೀನಿಧಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ದಕ್ಷಿಣ ಭಾರತದ ಶೈಕ್ಷಣಿಕ ಸಾಧನೆಗೆ ಮಠ&ಮಾನ್ಯಗಳ ಕೊಡುಗೆ ಅಪಾರ. ಅನ್ನ, ಅಕ್ಷರ ದಾಸೋಹದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ ಸಿದ್ಧಗಂಗಾ ಶ್ರೀಗಳ ಅನುಗ್ರಹದೊಂದಿಗೆ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಬೆಳೆಸಿದ ಕೆ.ಬಿ.ಜಯಣ್ಣ ಸಾಧನೆ ಅಭೂತಪೂರ್ವವಾದುದು ಎಂದು ಕೊಂಡಾಡಿದರು.

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, 75 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿಕೊಂಡರೆ ಆರ್ಥಿಕ ಸದೃಢ ರಾಷ್ಟ್ರವಾಗಿ ಪ್ರಪಂಚದ ನಾಲ್ಕನೇ ದೊಡ್ಡಶಕ್ತಿಯಾಗಿ ಭಾರತವು ಗುರುತಿಸಿಕೊಂಡಿದೆ. ನಮ್ಮ ನಾಡು ಅಭಿವೃದ್ಧಿಯಾಗುವುದರ ಹಿಂದೆ ಶಿಕ್ಷಣ ಕ್ಷೇತ್ರದ ಕೊಡುಗೆ ಅಪಾರ. ಅಕ್ಷರಸ್ಥರ ಸಂಖ್ಯೆ ಶೇ.80ಕ್ಕೂ ಹೆಚ್ಚಿದೆ. ಪ್ರತಿಯೊಬ್ಬರೂ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಮೂಲಕ ಈ ಸುಧಾರಣೆ, ಬದಲಾವಣೆ ಸಾಧ್ಯವಾಗಿದೆ. ಕಲ್ಪತರು ನಗರವನ್ನು ಶೈಕ್ಷಣಿಕ ನಗರವಾಗಿಸುವಲ್ಲಿ ಇಲ್ಲಿನ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದ ಮಹನೀಯರ ಕನಸಿದೆ. ಅವರ ಮನೆಮಂದಿಯ ಕೊಡುಗೆಯಿದೆ ಎಂದರು. ಶಿಕ್ಷಣ ವ್ಯಾಪಾರೀಕರಣದ ಸನ್ನಿವೇಶದಲ್ಲಿ ಸಿದ್ಧಗಂಗಾ ಮಠವು ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಲಾಂತರ ಬಡಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಿ ಯಾರೂ ಮಾಡದ ಕೈಂಕರ್ಯ ಮಾಡಿದೆ ಎಂದು ಹೇಳಿದರು.

ವಿದ್ಯೆ ಯಾರ ಸ್ವತ್ತಲ್ಲ, ಬಡತನ ಶಾಶ್ವತವಲ್ಲ. ಒಬ್ಬ ಸಾಮಾನ್ಯ ಶಿಕ್ಷಕನಾಗಿ ಶಿವಕುಮಾರ ಶ್ರೀಗಳ ಆಶೀರ್ವಾದದ ಬಲದಿಂದ ಶಿಕ್ಷಣ ಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ದಾರಿಮಾಡಿಕೊಟ್ಟ ಪುಣ್ಯಾತ್ಮ ಜಯಣ್ಣ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ. ಅವರ ನಡೆನುಡಿ ಎಲ್ಲರಿಗೂ ಆದರ್ಶವಾಗಲಿ ಎಂದರು.

ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಗೆ ದೊಡ್ಡು ಕೊಡುಗೆ ಸಿದ್ಧಗಂಗಾ ಶ್ರೀಗಳು. ಬರೀ ಜಿಲ್ಲೆಯಲ್ಲಿ ಮಾತ್ರವಲ್ಲ, ನಾಡಿನೆಲ್ಲೆಡೆ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಶ್ರೀಗಳು ಪ್ರೇರಣೆಯಾಗಿದ್ದಾರೆ ಎಂದು ಸಿದ್ಧಗಂಗಾಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸ್ಮರಿಸಿಕೊಂಡರು.

ಪ್ರಾಥಮಿಕ, ಪ್ರೌಢಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ಸಿದ್ಧಗಂಗಾ ಶ್ರೀಗಳು ಶಿಕ್ಷಣ ತಳಪಾಯವನ್ನು ಮಕ್ಕಳಿಗೆ ಹಾಕಿಕೊಟ್ಟವರು. ಕೆ.ಬಿ.ಜಯಣ್ಣನವರು ಶಿಕ್ಷಣಕ್ಷೇತ್ರದಲ್ಲಿ ಮಾತ್ರವಲ್ಲದೇ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡವರು. ಅವರ ಪತ್ನಿ ಪೂರ್ಣಿಮಾ ಕೂಡಾ ಪತಿಯ ಸಾಧನೆಯಲ್ಲಿ ಸಮಭಾಗಿ. ವಿದ್ಯಾವಾಹಿನಿ ಸಮೂಹ ಸಂಸ್ಥೆಗಳು ಇಂದು ಎಲ್ಲಾ ರೀತಿಯಿಂದಲೂ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿಕೊಡುತ್ತಿವೆ. ಈ ಸೇವೆಯನ್ನು ಸಮರ್ಪಕವಾಗಿ ಮುಂದುವರಿಸಿಕೊಂಡು ಹೋಗುವಲ್ಲಿ ಪ್ರದಿಪ್​ ಕುಮಾರ್​ ಅವರು ಶ್ರಮಿಸುತ್ತಿದ್ದಾರೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಬಿ.ಜಯಣ್ಣ, ಸಂಸ್ಥೆಯ ಮೇಲೆ ವಿಶ್ವಾಸವಿರಿಸಿ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಕಳುಹಿಸುವ ಪಾಲಕರು ನಿಜಾರ್ಥದಲ್ಲಿ ಸಂಸ್ಥೆಯನ್ನು ಬೆಳೆಸಿದವರು. ಈ ಅಭಿನಂದನೆಗಾಗಿ ಎಲ್ಲರಿಗೂ ಆಭಾರಿಯಾಗಿದ್ದೇನೆ. ನನ್ನ ಬದುಕಿನ ಅತ್ಯಂತ ಸಂತೃಪ್ತ ಕ್ಷಣ ಇಂದು ಎಂದರು. ಸಹಕಾರ ಸಚಿವ ಕೆ.ಎನ್​.ರಾಜಣ್ಣ ಕಾರ್ಯಕ್ರಮಕ್ಕೆ ಶುಭಕೋರಿದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಐಎಎಸ್​ ಅಧಿಕಾರಿ ಡಾ.ಸಿ.ಸೋಮಶೇಖರ್​ ಅಭಿನಂದನಾ ನುಡಿಗಳನ್ನಾಡಿದರು. ಶಾಸಕರಾದ ಬಿ.ಸುರೇಶಗೌಡ, ಚಿದಾನಂದ ಎಂ.ಗೌಡ, ಮಾಜಿ ಸಂಸದ ಜಿ.ಎಸ್​.ಬಸವರಾಜು, ವಿಧಾನ ಪರಿಷತ್​ ಮಾಜಿ ಸದಸ್ಯ ಎಚ್​.ಎಸ್​.ಶಿವಶಂಕರ್​ ಉಪಸ್ಥಿತರಿದ್ದರು. ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್​.ಬಿ.ಪ್ರದಿಪ್​ ಕುಮಾರ್​ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಭಿನಂದನಾ ಗ್ರಂಥದ ಸಂಪಾದಕ ಉಮಾಮಹೇಶ್​ ಗ್ರಂಥವನ್ನು ಪರಿಚಯಿಸಿದರು.

ಪುಕ್ಕಟೆ ಅಕ್ಕಿ ಕೊಡ್ತೀವಿ ಅಂತಾರೆ!: ಸ್ವಾತಂತ್ರ$್ಯ ಮುನ್ನ ಭಿೆ ಬೇಡುತ್ತಿದ್ದ ರಾಷ್ಟ್ರವೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಭಾರತವು ಈ 75 ವರ್ಷಗಳಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದು ಅಗಾಧ ಬದಲಾವಣೆ ಕಂಡಿದೆ. ಎರಡೊತ್ತಿನ ಊಟಕ್ಕೂ ಕಷ್ಟ ಅನ್ನುವಂತೆ ಆಹಾರ ಸಮಸ್ಯೆ, ಾಮ, ಬರಗಾಲ ಜನರನ್ನು ಕಾಡಿತ್ತು. ಆದರೀಗ ಯಾರೇ ಸಿಎಂ ಬಂದರೂ ಪುಕ್ಕಟೆ ಅಕ್ಕಿ ಕೊಡ್ತೀವಿ ಅನ್ನುವ ಮಟ್ಟಿಗೆ ನಮ್ಮ ರೈತರು ಬದಲಾವಣೆ ತಂದಿದ್ದಾರೆ ಎಂದು ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net