ಮಂಡ್ಯ : ರಾಜಕೀಯ ಸುಧಾರಣೆ, ಕೃಷಿ ರಂಗದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ಮಹಾನ್ ಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಜಗದೀಶ್ ತಿಳಿಸಿದರು.
ಮಳವಳ್ಳಿ ಪಟ್ಟಣದ ಸಾಹಿತ್ಯ ಭವನದಲ್ಲಿ ಭಾನುವಾರ ಕಸಾಪ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಸುಮಾರು 600ಕ್ಕೂ ಹೆಚ್ಚು ರಾಜರು ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿದ್ದರು. ಅವರಲ್ಲಿ ಬಹುತೇಕ ರಾಜರು ಮೋಜು ಮಸ್ತಿ ಮಾಡಿಕೊಂಡು ವೈಭವದ ಜೀವನದೊಂದಿಗೆ ಕಾಲಹರಣ ಮಾಡುತ್ತಿದ್ದರು. ಆದರೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಜೆಗಳ ಹಿತಕ್ಕಾಗಿ ಸದಾ ಚಿಂತಿಸುತ್ತಾ ಪರಿಣಾಮಕಾರಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಅನುಷ್ಠಾನಕ್ಕೆ ತಂದ ಯೋಜನೆಗಳು ಇಂದಿಗೂ ಜನಸಾಮಾನ್ಯರ ಬದುಕಿಗೆ ಭದ್ರ ಬುನಾದಿಯಾಗಿವೆ ಎಂದರು.
ಏಷ್ಯಾ ಖಂಡದಲ್ಲೇ ಜಲ ವಿದ್ಯುತ್ತನ್ನು ಮಳವಳ್ಳಿ ತಾಲೂಕಿನ ಶಿಂಷಾಪುರದಲ್ಲಿ 1902ರಲ್ಲಿ ಪ್ರಾರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಬ್ಯಾಂಕ್, ಸಹಕಾರ ಸಂಘಗಳು, ಭದ್ರಾವತಿ ಪೇಪರ್ ಮಿಲ್, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಮುಂತಾದ ಕೈಗಾರಿಕೆಗಳ ಸ್ಥಾಪನೆಗೆ ಕಾರಣಕರ್ತರಾದರು. ಅವರ ದೂರದೃಷ್ಟಿ ಪರಿಣಾಮ ಈ ನಾಡು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಲಿತರಿಗೆ ಶಿಕ್ಷಣ, ಭೂಮಿ ನೀಡಿದರು. ಬಾಲ್ಯವಿವಾಹ ಹಾಗೂ ದೇವದಾಸಿ ಪದ್ಧತಿ ನಿಷೇಧ ಸೇರಿ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧದ ಕಾನೂನು ಜಾರಿಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ನಾಲ್ವಡಿ ಅವರನ್ನು ಈ ನಾಡಿನ ಜನತೆ ಸದಾ ಕೃತಜ್ಞತಾ ಭಾವದಿಂದ ಸ್ಮರಿಸಿಕೊಳ್ಳಬೇಕು ಎಂದು ಜಗದೀಶ್ ಹೇಳಿದರು.
ಇದೇ ಸಂದರ್ಭದಲ್ಲಿ ಒಡಿಸಾದ ರೈಲುಗಳ ಅವಘಡದಲ್ಲಿ ಮೃತಪಟ್ಟವರಿಗೆ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಸಾಹಿತಿ ಮಸಿ ನಾರಾಯಣ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಗಂಗರಾಜ್ ಅರಸು, ಮುಖಂಡರಾದ ಪುಟ್ಟಸ್ವಾಮಿ, ಚುಂಚಣ್ಣ, ಮಾದೇಗೌಡ, ಮಹಾಲಿಂಗಯ್ಯ, ಹರ್ಷ ಇತರರಿದ್ದರು.