

ಪಾಂಡವಪುರ: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾಲೂಕು ವೀರಶೈವ ಮಹಾಸಭಾ ಹಾಗೂ ಮಠದ ಭಕ್ತಾದಿಗಳು ದಾಸೋಹ ದಿನವನ್ನು ಆಚರಿಸಿದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಶ್ರೀಗಳು ನಡೆದು ಬಂದ ದಾರಿಯನ್ನು ಪ್ರತಿಯೊಬ್ಬರೂ ಅನುಸರಿಬೇಕಿದೆ. ತ್ರಿವಿಧ ದಾಸೋಹಿಗಳಾಗಿ ಈ ನಾಡಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಶ್ರೀಗಳು ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ವೀರಶೈವ ಮಹಾಸಭಾ ಅಧ್ಯಕ್ಷ ನಿರಂಜನ್ ಬಾಬು ಮಾತನಾಡಿ, ನಾವ್ಯಾರು ದೇವರನ್ನು ನೋಡಿಲ್ಲ. ಆದರೆ ಶ್ರೀಗಳು ದೇವರಂತೆ ಬದುಕಿ ತೋರಿಸಿಕೊಟ್ಟಿದ್ದಾರೆ. ತ್ರಿವಿಧ ದಾಸೋಹಗಳ ಮೂಲಕ ಕೋಟ್ಯಂತರ ಮಕ್ಕಳ ಭವಿಷ್ಯ ರೂಪಿಸಿದ ಮಹಾನ್ ಚೇತನ ಶಿವಕುಮಾರಸ್ವಾಮೀಜಿ ಪ್ರತಿಮೆ ನಿರ್ಮಾಣ ಕಾರ್ಯ ಆಗಬೇಕಿದೆ. ಅದಕ್ಕಾಗಿ ಎಲ್ಲ ಪಕ್ಷದ ನಾಯಕರು ಒಗ್ಗೂಡಿ ಪಟ್ಟಣದ ಪ್ರಮುಖ ವೃತ್ತದಲ್ಲಿ ಅವರ ಪ್ರತಿಮೆ ನಿರ್ಮಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಿಯಾನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್ ಮಾತನಾಡಿದರು. ನಂತರ ನೆರೆದಿದ್ದವರಿಗೆ ರೈಸ್‌ಬಾತ್, ಕೇಸರಿಬಾತ್ ವಿತರಿಸಲಾಯಿತು. ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ವೀರಶೈವ ಮಹಾಸಭಾ ಉಪಾಧ್ಯಕ್ಷ ಮಂಜುನಾಥ್, ಬಿಜೆಪಿ ಮುಖಂಡ ಕೆ.ಎಲ್.ಆನಂದ್, ರೈಸ್‌ಮಿಲ್ ತಮ್ಮಣ್ಣ, ಅಮೃತಿ ರಾಜಶೇಖರ್, ಬೇಬಿ ನಟರಾಜು, ಸಿದ್ದರಾಜು, ಲೋಕೇಶ್‌ಮೂರ್ತಿ ಇತರರಿದ್ದರು.