ನಾಡಿಗೆ ವಚನ ಸಾಹಿತ್ಯ ಬಿತ್ತರಿಸಿದ ಲಿಂಗಾನಂದ ಶ್ರೀ

Lingananda Sri spread Vachana literature to the nation
Lingananda Sri spread Vachana literature to the nation
Published on

ಕೂಡಲಸಂಗಮ : ಪ್ರವಚನದ ಮೂಲಕ ಬಸವತತ್ವ ನಾಡಿಗೆ ಪರಿಚಯಿಸಿ ವಚನ ಸಾಹಿತ್ಯ ಬಿತ್ತರಿಸಿದ ಶ್ರೇಯಸ್ಸು ಲಿಂಗಾನಂದ ಸ್ವಾಮೀಜಿಗೆ ಸಲ್ಲುತ್ತದೆ ಎಂದು ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠದ ಶರಣ ಲೋಕದಲ್ಲಿ ಸೋಮವಾರ ಆಯೋಜಿಸಿದ್ದ ಲಿಂಗಾನಂದ ಸ್ವಾಮೀಜಿ 30ನೇ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವತತ್ವ ನಿಷ್ಠೆಯ ಜಂಗಮಮೂರ್ತಿ ನಾಡಿಗೆ ಪರಿಚಯಿಸಿದವರೆ ಲಿಂಗಾನಂದ ಶ್ರೀಗಳು ಎಂದರು.

ಇಂದು ಬಸವತತ್ವ ಹೇಳುವ ಬಹುತೇಕ ಜಂಗಮಮೂರ್ತಿಗಳು ಅವರ ಶಿಷ್ಯರೇ ಆಗಿದ್ದಾರೆ. ಸಮಾಜದಲ್ಲಿ ಜಡ್ಡುಗಟ್ಟಿದ ಸಂಪ್ರದಾಯ, ಮೂಢನಂಬಿಕೆ ವಿರುದ್ಧ ನಿರಂತರ ಹೋರಾಟ ಮಾಡಿದರು. ಅನೇಕ ಕಷ್ಟಗಳನ್ನು ಎದುರಿಸಿದರು. ಜಂಗಮತ್ವ ಅರ್ಹತೆಯಿಂದ ಬರಬೇಕು ಎಂದು ಪ್ರತಿಪಾದಿಸಿದ ಅವರು ನಮ್ಮೊಂದಿಗೆ ಇರದೆ ಇದ್ದರೂ ಅವರು ಪ್ರತಿಪಾದಿಸಿದ ತತ್ವ, ಸಿದ್ಧಾಂತಗಳಿವೆ ಎಂದರು.

1970ರಲ್ಲಿಯೇ ಲಿಂಗಾಯತರನ್ನು ಸಂಘಟಿಸುವ ಕಾರ್ಯವನ್ನು ಲಿಂಗಾನಂದ ಸ್ವಾಮೀಜಿ ಮಾಡಿದರು. ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲಿ ಬಸವ ತತ್ವ ಸಮ್ಮೇಳನದ ಮೂಲಕ ಲಿಂಗಾಯತರನ್ನು ಸಂಘಟಿಸಿದ ಶ್ರೇಯಸ್ಸು ಶ್ರೀಗಳಿಗೆ ಸಲ್ಲುತ್ತದೆ. ಅವರ ಸಾಹಿತ್ಯ ಹಲವಾರು ಸಾಮಾಜಿಕ ಬದಲಾವಣೆಗೆ ಕಾರಣವಾಯಿತು ಎಂದರು.

ಸಮಾರಂಭದಲ್ಲಿ ಪ್ರವೀಣ, ಯಲ್ಲಮ್ಮ, ಸಂಗಮ್ಮ ಕುಂಬಾರ, ಲೋಹಿತಾದೇವಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net