ನಾಡಿಗೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ

52
Published on

ಮೈಸೂರು: ನಾಡಿಗೆ ಮೈಸೂರು ಸಂಸ್ಥಾನದ ರಾಜರ ಕೊಡುಗೆ ಅಪಾರ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.


ನಂಜರಾಜ ಬಹದ್ದೂರ್ ಎಜುಕೇಷನ್ ಫಂಡ್ ಬೋರ್ಡಿಂಗ್ ಹೋಂ ಮತ್ತು ಶ್ರೀರಾಮ ಸೇವಾ ಅರಸು ಮಂಡಳಿ ವತಿಯಿಂದ ನಗರದ ಕೆ.ಆರ್.ವನಂ ಬಡಾವಣೆಯಲ್ಲಿ ನಿರ್ಮಿಸಿರುವ ನೂತನ ಶತಮಾನೋತ್ಸವ ಭವನವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದರು. ಮೈಸೂರು ರಾಜರು ಜನಪರವಾಗಿದ್ದರು. ಶಿಕ್ಷಣ, ಆರೋಗ್ಯ, ಕೈಗಾರಿಕೆ, ನೀರಾವರಿ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರ ಅಭಿವೃದ್ಧಿ ಮಾಡಿದ್ದರು. ನಾಡಿನ ಸಮಗ್ರ ಪ್ರಗತಿಗೆ ಒಡೆಯರ್ ಶ್ರಮಿಸಿದ್ದರು. ಇದರ ಫಲವಾಗಿ ನಾಡು ಸಮೃದ್ಧವಾಗಿ ಇರಲು ಸಾಧ್ಯವಾಗಿದೆ ಎಂದರು.


ಒಡೆಯರು ಮತ್ತು ಅರಸು ಸಮುದಾಯ ಹಳೇ ಮೈಸೂರು ಭಾಗಕ್ಕೆ ಹೊಸ ಚೈತನ್ಯ ಮತ್ತು ಹೊಸಕಿರಣ ನೀಡಿದ ಮನೆತನವಾಗಿದೆ. ಉಳುವವನಿಗೆ ಭೂಮಿ ನೀಡುವ ಮೂಲಕ ರಾಜ್ಯದಲ್ಲಿ ರೈತರಿಗೆ ಹೊಸ ಜೀವನ ಕೊಟ್ಟವರು ಡಿ.ದೇವರಾಜ ಅರಸು. ಅವರಂತಹ ಪ್ರಮುಖ ನಾಯಕನ್ನು ಅರಸು ಸಮುದಾಯ ನಾಡಿಗೆ ನೀಡಿದೆ ಎಂದರು.


ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಅಕ್ಕ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಶಿವಮೂರ್ತಿ ಕೀಲಾರ, ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಮಾಜಿ ಮೇಯರ್ ಪುರುಷೋತ್ತಮ್, ಸಮಾಜ ಸೇವಕ ಬಿ.ಎನ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.


ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ತನ್ವೀರ್ ಸೇಠ್, ಗಣಿಗ ರವಿ, ಸಂಸ್ಥೆಯ ಮಹಾಪೋಷಕರಾದ ಡಾ.ಬಿ.ಎನ್.ಬಹದ್ದೂರ್, ಅಮೆರಿಕದ ಭೂದೇವಿ ಆಧ್ಯಾತ್ಮಿಕ ಕೇಂದ್ರದ ಸಂಸ್ಥಾಪಕ ಡಾ.ಎಲ್.ಎನ್.ಮೂರ್ತಿ ಆಲಗೆರೆ, ಮಂಡಳಿಯ ಅಧ್ಯಕ್ಷ ಲಕ್ಷ್ಮೀಕಾಂತರಾಜೇ ಅರಸು, ಕಾರ್ಯದರ್ಶಿ ಪ್ರತಾಪ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net