ನಾಡಿಗೆ ಬೇಕು ಯುವಜನರ ಕೊಡುಗೆ

CTD Yuva Dina--
Published on

ಚಿತ್ರದುರ್ಗ: ಉತ್ಸಾಹ, ಛಲದೊಂದಿಗೆ ಕುಟುಂಬ, ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ‌್ಯದರ್ಶಿ, ನ್ಯಾಯಾಧೀಶ ಎಂ.ವಿಜಯ್ ಯುವಜನರಿಗೆ ಸಲಹೆ ನೀಡಿದರು.
ನಗರದ ಅಮೃತ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ, ಯುವ ಜನರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ಯುವ ಜನರು ಶ್ರಮಿಸಬೇಕು. ಜೀವನದ ಗುರಿ ಸಾಧಿಸಬೇಕಿರುವ ಯುವ ಜನರಿಂದು ತಮ್ಮ ಜವಾಬ್ದಾರಿಗಳಿಂದ ವಿಮುಖರಾಗುತ್ತಿದ್ದಾರೆ. ತಪ್ಪು ಮಾಡಿ ಕಾನೂನಿನ ಸಂಘರ್ಷಕ್ಕೆ ತುತ್ತಾಗುತ್ತಿದ್ದಾರೆ. ಪೋಕ್ಸೋ, ಬಾಲ್ಯವಿವಾಹ ನಿಷೇಧ ಕಾಯ್ದೆ, ಸೈಬರ್‌ಕ್ರೈಂ, ಮಾದಕ ವ್ಯಸನಗಳಿಂದ ಆಗುವ ಅನಾಹುತಗಳೆಡೆ ಜಾಗೃತಿ ಮೂಡಿಸಬೇಕಿದೆ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿರುವ ನಾವಿಂದು, ಡಿಜಿಟಲ್ ಉಪಕರಣಗಳ ಬಳಕೆ ಕುರಿತಂತೆ ನಮ್ಮ ಜ್ಞಾನವನ್ನು ವೃದ್ಧಿಸಕೊಳ್ಳ ಬೇಕಿದೆ ಎಂದರು.
ನೆಹರು ಯುವಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಎನ್.ಸುಹಾಸ್ ಮಾತನಾಡಿ, ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿರುವ ನೈಸರ್ಗಿಕ ಸಂಪತ್ತಿನ ಜತೆಗೆ ಯುವ ಸಂಪತ್ತು ಬಹಳ ಮುಖ್ಯವಾದ ಪಾತ್ರವನ್ನು ವಹಿಸಲಿದೆ. ಯುವ ಜನರಲ್ಲಿ ಅಗಾಧವಾದ ಶಕ್ತಿ ಇದ್ದು, ಯುವಕರು ಭವಿಷ್ಯದ ನಾಯಕರು, ಅಭಿವೃದ್ಧಿ ಹರಿಕಾರರು. ಉತ್ತಮ ಸಮಾಜಕ್ಕಾಗಿ ಕಾನೂನಿನ ತಿಳಿವಳಿಕೆ ಮುಖ್ಯ. ಇದರ ಅರಿವು ಹೆಚ್ಚಾದಂತೆ ಅಪರಾಧಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ‌್ಯದರ್ಶಿ ಆರ್.ಗಂಗಾಧರ್ ಮಾತನಾಡಿದರು. ದೇವರಾಜ ಅರಸು ವಿದ್ಯಾಸಂಸ್ಥೆ ಕಾರ‌್ಯದರ್ಶಿ ಭರತ್, ಅಮೃತ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಮೊಹಮ್ಮದ್ ವಜಾಹತ್ ಉಲ್ಲಾ, ನೀಲಕಂಠಯ್ಯ ಮೆಮೊರಿಯಲ್ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಟಿ.ದುರುಗಪ್ಪ, ರೆಡ್‌ಕ್ರಾಸ್‌ಸಂಸ್ಥೆಯ ಇ.ಅರುಣ್‌ಕುಮಾರ್, ಎನ್.ಮಜಹರ್ ಉಲ್ಲಾ ಇದ್ದರು.
ನೆಹರು ಯುವ ಕೇಂದ್ರ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ನೀಲಕಂಠಯ್ಯ ಮೆಮೊರಿಯಲ್ ಪದವಿ ಪೂರ್ವ ಕಾಲೇಜಿನಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net