

ಚಾಮರಾಜನಗರ: ಕಾಡಿನ ರಕ್ಷಣೆ ಅರಣ್ಯ ಪಾಲಕರ ಕರ್ತವ್ಯವಾದರೆ, ನಾಡಿನ ಜನರ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುವ ಪೊಲೀಸರ ಸೇವಾ ಕಾರ್ಯ ಅವೀಸ್ಮರಣೀಯವಾಗಿದೆ ಎಂದು ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ.ಪ್ರಭಾವತಿ ತಿಳಿಸಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ನೂತನವಾಗಿ ನಿರ್ಮಿಸಿರುವ ರಾಜ್ಯದಲ್ಲಿಯೇ ಅತೀ ಎತ್ತರದ (27 ಅಡಿ) ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಅವರು ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿ ಮಾತನಾಡಿದರು.
ಪೊಲೀಸ್ ಹುತಾತ್ಮ ದಿನಾಚರಣೆ ಕರ್ತವ್ಯದ ಸಂದರ್ಭದಲ್ಲಿ ಹುತಾತ್ಮರಾಗಿ, ಕುಟುಂಬದಿಂದ ದೂರವಾದ ಸ್ಮರಣೀಯ ದಿನವೂ ಆಗಿದೆ. ಕಾಡಿನ ರಕ್ಷಣೆ ಅರಣ್ಯ ಪಾಲಕರ ಕರ್ತವ್ಯವಾದರೆ, ನಾಡಿನ ಜನರ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುವ ಪೊಲೀಸರ ಸೇವಾ ಕಾರ್ಯ ಅವೀಸ್ಮರಣೀಯ ಹಾಗೂ ಶ್ಲಾಘನೀಯವಾಗಿದೆ. ಸಮಾಜದಲ್ಲಿ ಜನರು ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆ ನಡೆಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ ಎಂದರು.
ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಜನತೆ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಪೊಲೀಸರ ದಕ್ಷತೆ ಹಾಗೂ ಪ್ರಾಮಾಣಿಕತೆಯೇ ಕಾರಣವಾಗಿದೆ. ಕರ್ತವ್ಯದ ಸಮಯದಲ್ಲಿ ಸಾಕಷ್ಟು ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಾನೂನು ಪಾಲನೆ ಹಾಗೂ ಪೊಲೀಸರ ಕರ್ತವ್ಯಗಳ ಬಗ್ಗೆ ಶಿಕ್ಷಕರು ತಿಳಿಹೇಳಬೇಕು. ಆಗಮಾತ್ರ ದೇಶಕ್ಕೆ ಉತ್ತಮ ನಾಯಕನನ್ನು ಸೃಷ್ಠಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, 1959ರ ಇದೇ ದಿನದಂದು ಲಡಾಕ್‌ನ ಅಕ್ಸಾಯ್ ಪ್ರದೇಶದಲ್ಲಿ ಗಡಿಪಹರೆಯಲ್ಲಿದ್ದ ನಮ್ಮ ಸೈನಿಕರ ಮೇಲೆ ಚೀನಾ ಸೈನಿಕರು ಏಕಾಏಕಿ ದಾಳಿ ನಡೆಸಿದರು. ನಿಶಸ್ತ್ರರಾಗಿದ್ದ ನಮ್ಮ ಸೈನಿಕರು ಎದೆಗುಂದದೇ ಹೋರಾಡಿದರು. ಹೋರಾಟದಲ್ಲಿ ನಮ್ಮ 10 ಸೈನಿಕರು ವೀರಮರಣ ಹೊಂದಿದ ಸ್ಮರಾಣಾರ್ಥ ಭಾರತ ಸರ್ಕಾರವು 16 ಸಾವಿರ ಅಡಿ ಎತ್ತರದ ಲಡಾಕ್‌ನ ಅಕ್ಸಾಯ್ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿದೆ. ಅಂದಿನಿಂದ ಪ್ರತಿವರ್ಷ ಅ. 21ರಂದು ಹುತಾತ್ಮರ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.
ಈ ಬಾರಿ ಕರ್ತವ್ಯದ ಸಂದರ್ಭದಲ್ಲಿ ಕರ್ನಾಟಕದ 8 ಪೊಲೀಸರು ಸೇರಿದಂತೆ ದೇಶದಲ್ಲಿ 191 ಪೊಲೀಸರು ಹುತಾತ್ಮರಾಗಿದ್ದಾರೆ. ಅವರೆಲ್ಲರಿಗೂ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಹುತಾತ್ಮರ ದಿನವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ರಾಜ್ಯದಲ್ಲಿಯೇ ಅತಿ ಎತ್ತರದ ಪೊಲೀಸ್ ಸ್ಮಾರಕವನ್ನು ಚಾಮರಾಜನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಒಡೆತನದ ಕ್ಯಾಂಪಾ ಕೋಲಾ ಬೇವರೇಜ್ ಕಂಪನಿ ನೆರವಿನೊಂದಿಗೆ ನೂತನವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಬಿ.ಭಾಸ್ಕರ್, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಣ್ಯರಿಂದ ಸ್ಮಾರಕಕ್ಕೆ ಪುಷ್ಪನಮನ:
ಕಾರ್ಯಕ್ರಮದ ಆರಂಭದಲ್ಲಿ ಪೊಲೀಸ್ ತುಕಡಿಗಳಿಂದ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಪ್ರಭಾವತಿ ಅವರು ಗೌರವ ವಂದನೆ ಸ್ವೀಕರಿಸಿದರು. ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಲಾಯಿತು. 2 ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಬಳಿಕ ಪೊಲೀಸ್ ಬ್ಯಾಂಡ್‌ನಿಂದ ಶತಶತಮಾನಗಳ ಚಿರನೂತನ ಅಬಾಯ್ಡ್ ವಿತ್ ಮಿ ಗೀತೆ ನುಡಿಸಲಾಯಿತು. ಬಳಿಕ ಗಣ್ಯರು ಸ್ಮಾರಕಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು.