ನಾಡಹಬ್ಬದಲ್ಲಿ ಕೈಗಾರಿಕೆ ದಸರಾ ಆಯೋಜಿಸಿ

11
Published on

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಕೈಗಾರಿಕಾ ದಸರಾವನ್ನು ಆಯೋಜಿಸಬೇಕು ಎಂದು ಮೈಸೂರು ಕೈಗಾರಿಕೆಗಳ ಸಂಘ ಒತ್ತಾಯಿಸಿದೆ.

ದಸರಾ ಮಹೋತ್ಸವದಲ್ಲಿ ಆಹಾರ ದಸರಾ, ಗ್ರಾಮೀಣ ದಸರಾ, ರೈತ ದಸರಾ ಮಾದರಿಯಲ್ಲಿ ಕೈಗಾರಿಕೆ ಮತ್ತು ಉದ್ಯಮ ವಲಯದ ಬೆಳವಣಿಗೆಗೆ ಪೂರಕವಾಗಿ ಕೈಗಾರಿಕಾ ದಸರಾ ಹಮ್ಮಿಕೊಳ್ಳಬೇಕು ಎಂದು ಕೋರಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದೆ.

ಕೈಗಾರಿಕಾ ಬಜಾರ್: ಮೈಸೂರು ಭಾಗದಲ್ಲಿ ತಯಾರಿಸುವ ಉತ್ಪನ್ನಗಳನ್ನು ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಉತ್ಪಾದಕರಿಂದ ಗ್ರಾಹಕರಿಗೆ ನೇರ ಮಾರಾಟ ಮತ್ತು ಪ್ರದರ್ಶನಕ್ಕೆ ಕೈಗಾರಿಕಾ ಬಜಾರ್‌ನಲ್ಲಿ ಅವಕಾಶ ಕಲ್ಪಿಸಬಹುದು. 2003-04ರಲ್ಲಿ ಮೈಸೂರು ಕೈಗಾರಿಕೆಗಳ ಸಂಘದಿಂದ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಆಯೋಜಿಸಿದ್ದ ಕೈಗಾರಿಕಾ ಬಜಾರ್ ಯಶಸ್ವಿಯಾಗಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕೈಗಾರಿಕಾ ಪ್ರವಾಸ: 2500ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ತಯಾರಿಸುವ, ಆಗ್ನೇಯ ಏಷ್ಯಾದ ಅತಿದೊಡ್ಡ ಒಂದೇ ತೆಕ್ಕೆಯಲ್ಲಿ ಬರುವ ಮೈಸೂರಿನ ಕೈಗಾರಿಕಾ ಪ್ರದೇಶದ ವೀಕ್ಷಣೆಗಾಗಿ(ಹೊರನೋಟ) ಕೈಗಾರಿಕಾ ಪ್ರವಾಸವನ್ನು ಆಯೋಜಿಸಬೇಕು. ಮೈಸೂರು ಸಿಲ್ಕ್ ಫ್ಯಾಕ್ಟರಿ, ಸ್ಯಾಂಡಲ್ ಆಯಿಲ್ ಫ್ಯಾಕ್ಟರಿ, ಅಳಿಸಲಾಗದ ಶಾಯಿ, ಮೈಸೂರು ಪೇಂಟ್ಸ್, ಸಿದ್ಧ ಉಡುಪುಗಳು, ಪಾದರಕ್ಷೆ ಇನ್ನಿತರ ಕಾರ್ಖಾನೆಗಳ ಭೇಟಿಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಉತ್ಪಾದಕರ ಸಮಾವೇಶ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೈಗಾರಿಕಾ ನೀತಿ, ಪ್ರೋತ್ಸಾಹ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಖರೀದಿದಾರರ ಮತ್ತು ಉತ್ಪಾದಕರ ಸಮಾವೇಶ, ಪ್ರದರ್ಶನ ಮತ್ತು ಸಭೆ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಸಂಘದ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್, ಖಜಾಂಚಿ ಮಂಜುನಾಥ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಎಸ್.ಸತೀಶ್, ಹೆಬ್ಬಾಳು ಕೈಗಾರಿಕಾ ಎಸ್ಟೇಟ್ ತಯಾರಕರ ಸಂಘದ ಸುಬ್ರಮಣಿಯನ್ ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net