

ದಸರಾದ 5ನೇ ದಿನದಲ್ಲೂ ಸಡಗರ, ಸಂಭ್ರಮ ಇಮ್ಮಡಿಗೊಂಡಿದೆ. ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಯುವ ದಸರಾ, ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಲಗ್ಗೆ ಇಟ್ಟಿದ್ದು, ದಸರೆ ಕಳೆಗಟ್ಟಿದೆ.
ಬೆಳಗ್ಗೆ ನಗರದ ರಂಗಾಚಾರ್ಲು ಪುರಭವನ ಆವರಣದಿಂದ ಹೊರಟ ‘ಪಾರಂಪರಿಕ ನಡಿಗೆ’ ಇತಿಹಾಸ, ಚರಿತ್ರೆಯ ಮೇಲೆ ಬೆಳಕು ಚೆಲ್ಲಿತು. ದೊಡ್ಡ ಗಡಿಯಾರ, ಚಿಕ್ಕಗಡಿಯಾರ, ಅರಮನೆ, ಮಾರುಕಟ್ಟೆ, ವೃತ್ತಗಳು ಎದುರು ಸಾಗುವ ಮೂಲಕ ಪಾರಂಪರಿ ಮೌಲ್ಯದ ಮಹತ್ವ ಸಾರುವ ಮೂಲಕ ಐತಿಹಾಸಿಕ ಕುರುಹುಗಳ ಸಂರಕ್ಷಣೆಗೆ ಸಂಕಲ್ಪ ಮಾಡಲು ಉದ್ದೀಪನಗೊಳಿಸಿತು.
ರೈತ ದಸರಾದಲ್ಲಿ ಕೃಷಿ ಸಂಸ್ಕೃತಿ ಅನಾವರಣಗೊಂಡಿತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ರೈತ ದಸರಾ ಮೆರವಣಿಗೆದಲ್ಲಿ ನೂರಾರು ರೈತರು ಹೆಜ್ಜೆ ಹಾಕಿದರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಎತ್ತಿನ ಗಾಡಿಯನ್ನು ಓಡಿಸುವ ಮೂಲಕ ಮಿಂಚಿದರು.
ಜತೆಗೆ, ನಂದಿ ಧ್ವಜ, ನಗಾರಿ ಹಾಗೂ ತಮಟೆ, ವೀರಗಾಸೆ, ವೀರಭದ್ರ ನೃತ್ಯ, ಖಡ್ಗ ಪ್ರದರ್ಶನ ಕಲಾ ತಂಡಗಳೊಂದಿಗೆ ವಿವಿಧ ತಳಿಯ ಎತ್ತುಗಳು, ಕರುಗಳು, ಆಂಧ್ರ ತಳಿಯಾದ ಪುಂಗನೂರು ಎತ್ತು, ಹೋರಿ, ಹಳ್ಳಿಕಾರ್ ತಳಿ, ಬಂಡೂರು ಕುರಿಗಳು, ಎತ್ತಿನಗಾಡಿ ಎತ್ತು ಆಕರ್ಷಿಸಿದವು. ಹೊಸ ಕೃಷಿ ತಂತ್ರಜ್ಞಾನಗಳಾದ ಬೆಳೆ ಸಿಂಪಡಿಸುವ ಡ್ರೋನ್ ತಂತ್ರಜ್ಞಾನ ಯಂತ್ರ, ಭತ್ತ ನಾಟಿ ಯಂತ್ರ, ಇಪ್ಕೋ ನ್ಯಾನೋ ಯೂರಿಯಾ ಲಿಕ್ವಿಡ್, ಸ್ವರಾಜ್ ಯಂತ್ರ, ಕಿಸಾನ್ ಬಂಡಿ ಕಬ್ಬು ಕಟಾವು ಯಂತ್ರಯೊಂದಿಗೆ ವಿವಿಧ ಯಂತ್ರಗಳನ್ನು ಪ್ರದರ್ಶಿಸಲಾಯಿತು.
ನಗರದ ಜೆ.ಕೆ. ಮೈದಾನದಲ್ಲಿ ಕೃಷಿ ವಸ್ತುಪ್ರದರ್ಶನ ಕಣ್ಮನ ಸೆಳೆಯಿತು. ಹಸಿರು ಟವಲ್‌ಗಳು ರಾರಾಜಿಸಿದವು. 46 ಮಳಿಗೆಗಳು ಕೃಷಿಯ ವೈವಿಧ್ಯಮಯ ಮಾಹಿತಿ ಉಣಬಡಿಸಿದವು. ಧಾನ್ಯಗಳು, ಪುಷ್ಪ ಕೃಷಿಯ ಜತೆಗೆ, ಪ್ರಾಣಿಗಳ ಸಾಕಣೆಯನ್ನು ಸಹ ಪ್ರದರ್ಶಿಸಲಾಯಿತು. ಬಂಡೂರು ಕುರಿ, ಡಾರ್ಕ್ ಫಾರ್ ಕುರಿ, ಮೈಸೂರು ನಾಟಿ ಕೋಳಿ, ಕಡಕ್ ನಾಷ್ ಕೋಳಿ, ಆಸಿಲ್ ಕೋಳಿ, ಟರ್ಕಿ ಕೋಳಿ, ಗಿನಿ ಪೌಲ್ ಕೋಳಿ, ಡಕ್ಸ್ ಕೋಳಿ, ಪುಂಗನೂರು ಹಸು, ಓಂಗೋಲ್ ಹಸು, ಸಾಹಿವಾಲ್ ಹಸು, ಗಿರ್ ಹಸು, ಹಳ್ಳಿಕಾರ್ ಹಸು ಹಾಗೂ ಮಲ್ನಾಡು ಗಿಡ್ಡ ಹಸು ಆಕರ್ಷಿಸಿದವು.
ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ನಾಗತಿಹಳ್ಳಿ ತೋಟಗಾರಿಕೆ ಕೇಂದ್ರ, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ... ಹೀಗೆ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳು ಒಕ್ಕಲುತನದ ಮಾಹಿತಿ ನೀಡಿದವು.
ಕೃಷಿ ಹವಾಮಾನದ ಮಾಹಿತಿ, ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ತಾಂತ್ರಿಕತೆ, ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಪ್ರದರ್ಶನ, ಗಾಣದಿಂದ ತೆಗೆದ ಕೊಬ್ಬರಿ, ಹರಳು ಮತ್ತು ಶೇಂಗಾ ಎಣ್ಣೆ, ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಇಲ್ಲಿತ್ತು. ಜತೆಗೆ, ರೇಷ್ಮೆ ಹುಳು ಸಾಕಾಣೆ, ಕೃಷಿ ಅರಣ್ಯ, ಶ್ರೀಗಂಧ ಕೃಷಿ ಮಾಹಿತಿ ಮತ್ತು ಜೈವಿಕ ಇಂಧನ, ಕಬ್ಬು ನಾಟ ಯಂತ್ರ ಹಾಗೂ ಕಬ್ಬು ಸಸಿಗಳ ಪ್ರದರ್ಶನ, ನೈಸರ್ಗಿಕ ಕೃಷಿ, ಸಿರಿ ಧಾನ್ಯಗಳ ಹಾಗೂ ಹೈನುಗಾರಿಕೆ, ಬ್ಯಾಂಕ್ ಸೌಲಭ್ಯಗಳ ಮಾಹಿತಿ ಸಹ ಕೊಡಲಾಯಿತು.
ಮಂಡ್ಯದ ರೈತರು ತಂದಿದ್ದ ಸಾವಯವ ಬೆಲ್ಲ ಗಮನ ಸೆಳೆಯಿತು. ಅದೇ ರೀತಿ ಬರಗಾಲ ನಿರ್ವಹಣೆ ಪರ್ಯಾಯ ಬೆಳೆ ಪದ್ಧತಿ ಹಾಗೂ ಮಣ್ಣು ನೀರು ಸಂರಕ್ಷಣಾ ವಿಧಾನ, ಪಿಎಂ ಕಿಸಾನ್, ರೈತರ ಬೆಳೆ ಸಮೀಕ್ಷೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯ, ರೈತ ಸಂಪರ್ಕ ಕೇಂದ್ರಗಳು, ಸಿರಿಧಾನ್ಯ ವಿವರ ಸೇರಿದಂತೆ ಯೋಜನೆಗಳ ಮಾಹಿತಿ, ಕೃಷಿ ಮಾಡುವ ವಿಧಾನದ ಕುರಿತು ಮಳಿಗೆಗಳು ಅರಿವು ಮೂಡಿಸಿದವು.
ಪ್ರತಿಭಾ ಕವಿಗೋಷ್ಠಿಯಲ್ಲಿ ಜಾನಪದ ಸೊಬಗು ಮೇಳೈಸಿತ್ತು. ದಸರಾ ಕವಿಗೋಷ್ಠಿಯಲ್ಲಿ ಇದೇ ಮೊದಲ ಬಾರಿಗೆ ವಿವಿಧ ಜಾನಪದಗಳ ಕಾವ್ಯವಾಚನ, ಗಾಯನಕ್ಕೆ ವೇದಿಕೆ ಕಲ್ಪಿಸಿಕೊಡಲಾಗಿತ್ತು. ನೆಲದ ಮಣ್ಣಿನ ಮಕ್ಕಳು ಕಟ್ಟಿದ ಜಾನಪದ, ಗೀಗಿಪದ, ಲಾವಣಿ ಪದ, ಸೋಬಾನೆ ಪದ, ಅಣಕುಪದ, ಪಾಡ್ದನಗಳ ಹದಪಾಕವೇ ಹರಿಯಿತು. ಜಾನಪದ ಆರಾಧಕರು ಇದರ ಸವಿ ಸವಿದು ಖುಷಿಪಟ್ಟರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 16 ವಿವಿಧ ಜಾನಪದ ಕಾವ್ಯವಾಚಕರು, ಗಾಯಕರು ಕಂಸಾಳೆ, ತಂಬೂರಿ, ತಾಳ, ಮದ್ದಳೆಗಳ ಸಂಗೀತದೊಂದಿಗೆ ಸರಸ-ಸಲ್ಲಾಪ, ಬಸುರಿ ಬಯಕೆ, ಜರಿವ ಪದ, ಒಗಟು ಪದ, ತುಳುನಾಡಿನ ದೈವ ಪದ, ಮಲೆ ಮಾದಪ್ಪ, ಬಿಳಿಗಿರಿರಂಗಪ್ಪನ ಮೇಲಿನ ಪದಗಳ ಜಾನಪದದ ವಿವಿಧ ಪ್ರಕಾರಗಳ ಗಾಯನಕ್ಕೆ ನೆರೆದಿದ್ದವರು ಕುಳಿತಲ್ಲೆ ತಲೆದೂಗಿದರು.
ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿ ಪೈಲ್ವಾನರ ನಡುವೆ ರೋಚಕ ಸೆಣಸಾಟಕ್ಕೆ ವೇದಿಕೆಯಾಯಿತು. ಯುವ ದಸರಾದಲ್ಲಿ ಟಾಲಿವುಡ್ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಸಂಗೀತ ಸುಧೆಯನ್ನೇ ಹರಿಸಿ ಯುವ ಮನಸ್ಸುಗಳನ್ನು ರಂಜಿಸಿದರು. ಅರಮನೆ ವೇದಿಕೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಪೊಲೀಸ್ ಬ್ಯಾಂಡ್‌ನಿಂದ ಸಂಗೀತದ ಹೊನಲು ಹರಿಯಿತು.