

ಕೊಳ್ಳೇಗಾಲ: ತಾಲೂಕಿನ ಸೂರಪುರ ಗ್ರಾಮದ ಕಬಿನಿ ಚಾನೆಲ್ ರಸ್ತೆಯಲ್ಲಿ ನಾಡ ಬಂದೂಕು ಹಿಡಿದು ತೆರಳುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಅಗರ-ಮಾಂಬಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕುಣಗಳ್ಳಿ ಗ್ರಾಮದ ಜೆಸಿಬಿ ಚಾಲಕ ಮಲ್ಲಿಕಾರ್ಜುನ ಬಂಧಿತ ಆರೋಪಿ.
ಈತ ಅರೇಪಾಳ್ಯದ ಕಡೆಯಿಂದ ಸೂರಪುರದ ಕಬಿನಿ ಕಾಲುವೆ ರಸ್ತೆಯಲ್ಲಿ ನಾಡ ಬಂದೂಕು ಹಿಡಿದು ತೆರಳುತ್ತಿದ್ದನೆಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಕವಿತಾ ನಿರ್ದೇಶನದಂತೆ ಡಿವೈಎಸ್ಪಿ ಎಂ.ಧರ್ಮೇಂದ್ರ ಹಾಗೂ ಸಿಪಿಐ ಶ್ರೀಕಾಂತ್ ಮಾರ್ಗ ದರ್ಶನದಲ್ಲಿ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಕರಿಬಸಪ್ಪ ಹಾಗೂ ತಂಡದಾಳಿ ನಡೆಸಿದ್ದು ಆರೋಪಿಯನ್ನು ನಾಡ ಬಂದೂಕು ಸಮೇತ ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಾಡು ಪ್ರಾಣಿಯನ್ನು ಬೇಟೆಯಾಡಲು ಬಂದೂಕನ್ನು ಬಳಸುತ್ತಿದ್ದ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಪರಶಿವಮೂರ್ತಿ, ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಎಸ್.ಬಿ. ಶಿವಕುಮಾರ್, ಉಸ್ಮಾನ್, ಯೋಗೇಶ್, ಬಸವರಾಜು, ಮಲ್ಲೇಶ್ ಇದ್ದರು.