ನಾಡಪ್ರಭು ಕೆಂಪೇಗೌಡರು ಒಳಿತಿಗಾಗಿ ಶ್ರಮಿಸಿದವರು

27 YERRISWAMY 01
Published on

ಬಳ್ಳಾರಿ : ನವ ಬೆಂಗಳೂರಿನ ನಿರ್ಮಾತೃ ಹಾಗೂ ಅಪ್ರತಿಮ ಆಡಳಿತಗಾರ ನಾಡಪ್ರಭು ಕೆಂಪೇಗೌಡರು ಜನ ಸಾಮಾನ್ಯರ ಒಳಿತಿಗಾಗಿ ಶ್ರಮಿಸಿದವರು ಎಂದು ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ ಹೇಳಿದರು.
ನಗರದ ಸಾಂಸ್ಕ್ರತಿಕ ಸಮುಚ್ಛಯ ಆವರಣದ ಹೊಂಗಿರಣದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಗುರುವಾರ ನಡೆದ ನಾಡಪ್ರಭು ಶ್ರೀಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಡದೊರೆ ಕೆಂಪೇಗೌಡ ಅವರು 52 ವರ್ಷಗಳ ಕಾಲ ಸುಧೀರ್ಘ ಆಡಳಿತ ನಡೆಸಿ, ಜನತೆಯ ಮನೆಮನಗಳಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮೊದಲೇ ನಾಂದಿಯಾಡಿದವರು ಕೆಂಪೇಗೌಡರು, ಅವರ ದೂರದೃಷ್ಟಿ ಅವಿಸ್ಮರಣೀಯವಾಗಿದೆ ಎಂದು ತಿಳಿಸಿದರು.
ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, ನವ ಬೆಂಗಳೂರಿನ ನಿರ್ಮಾಣದಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಪುಸ್ತಕದೊಡನೆ ಸ್ನೇಹ ಬೆಳಸಿಕೊಂಡು, ಮೊಬೈಲ್ ಗೀಳಿಗೆ ಒಳಗಾಗದೆ ಮಹಾನ ಸಾಧಕರ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕಿನ ಸಹ ಶಿಕ್ಷಕ ನಂದೀಶ ಪುಂಡಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕೆಂಪೇಗೌಡರಿಗೂ ಮತ್ತು ವಿಜಯನಗರ ಸಾಮ್ರಾಜ್ಯಕ್ಕೂ ಅವಿನಾಭಾವ ಸಂಬಂಧವಿದ್ದು, ವಿಶ್ವ ವಿಖ್ಯಾತ ಹಂಪಿಯ ವಿಜಯನಗರ ಸಾಮ್ರಾಜ್ಯದ ಉಳಿವಿಗಾಗಿ ಹೋರಾಡಿದ ಮಹಾನ ವೀರಯೋಧ ಅವರಗಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net