

ಚಿತ್ರದುರ್ಗ: ಜಿಲ್ಲಾಡಳಿತ ಜೂ.27ರಂದು ಬೆಳಗ್ಗೆ 11ಕ್ಕೆ ಡಿಸಿ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಏರ್ಪಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಯಂತಿ ಆಚರಣೆ ಕುರಿತ ಸಭೆಯಲ್ಲಿ ಮಾತನಾಡಿದ ಅ ವರು,ಈ ಜಯಂತಿ ಆಚರಣೆಗಾಗಿ ಪ್ರತಿ ತಾಲೂಕಿಗೆ 1 ಲಕ್ಷ ರೂ.ವಿಶೇಷ ಅನುದಾನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಿಂದ ಬಿಡುಗಡೆ ಮಾಡಲಾಗಿದೆ. 27ರಂದು ಜಿಲ್ಲಾ,ತಾಲೂಕುಮಟ್ಟದಲ್ಲಿ ಹಾಗೂ ಎಲ್ಲ ಶಾಲಾ-ಕಾಲೇಜುಗಳಲ್ಲೂ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದರು.
ನಾಡಪ್ರಭು ಕೆಂಪೇಗೌಡರ ಜೀವನ,ಸಾಧನೆ,ಕೊಡುಗೆಗಳ ಕುರಿತು ಶಾಲಾ-ಕಾಲೇಜುಗಳಲ್ಲಿ ಚರ್ಚಾ,ಪ್ರಬಂಧ ,ಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು. ವಿಜೇತ ವಿದ್ಯಾರ್ಥಿಗಳಿಗೆ ಜಯಂತಿ ಸಮಾರಂಭದಲ್ಲಿ ಬಹುಮಾನ ವಿತರಿಸ ಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ,ಗೀತಗಾಯನವಿರುತ್ತದೆ. ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಹನೀಯರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ನಾಗವೇಣಿ,ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ,ಶಾಲಾ ಶಿಕ್ಷಣ ಇಲಾಖೆ ಡಿವೈ ಪಿಸಿ ವೆಂಕಟೇಶ್,ಜಿಲ್ಲಾಒಕ್ಕಲಿಗರ ಸಂಘದ ಅಧ್ಯಕ್ಷ ಚೇತನ್,ಉಪಾಧ್ಯಕ್ಷ ಒ.ಎಲ್.ಮಂಜುಕುಮಾರ್,ಕಾರ್ಯದರ್ಶಿ ಜಗನ್ನಾಥ್, ನಿರ್ದೇಶಕರಾದ ಪರಮೇಶ್ವರ,ಜಿ.ದ್ಯಾಮಪ್ಪ ಮತ್ತಿತರರು ಇದ್ದರು.