

ಮೈಸೂರು: ಭವಿಷ್ಯದ ಹಿತದೃಷ್ಟಿ ಮತ್ತು ಸಂಘಟನೆಗೆ ಸ್ಫೂರ್ತಿ ತುಂಬಲು ಜೂ. 27ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಮುದಾಯದ ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಮನವಿ ಮಾಡಿದರು.
ವಿದ್ಯಾರಣ್ಯಪುರಂನ ಒಕ್ಕಲಿಗರ ಸಮುದಾಯ ಭವನದಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದಿಂದ ಸೋಮವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಚರಣೆಯ ನೇತೃತ್ವ ವಹಿಸಬೇಕು. ಕಾರ್ಯಕ್ರಮದಲ್ಲಿ ಸಮುದಾಯದ ಇಬ್ಬರು ಹಿರಿಯ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡುವಂತಾದರೆ ಒಳಿತು ಎಂದು ಸಲಹೆ ನೀಡಿದರು.
ಸಮುದಾಯದ ಮುಖಂಡರಾದ ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡ, ವಾಸು, ನಾಗೇಂದ್ರ ಅವರೆಲ್ಲರ ಸಹಕಾರವನ್ನೂ ಆಚರಣಾ ಸಮಿತಿ ಪಡೆಯಬೇಕು. ಬೇಕಾದರೆ ಮತ್ತೊಮ್ಮೆ ಪೂರ್ವಭಾವಿ ಸಭೆ ನಡೆಸಿ, ಸಮುದಾಯದ ವ್ಯಕ್ತಿಗಳಿಂದ ನಡೆಸಲ್ಪಡುವ ಶಿಕ್ಷಣ ಸಂಸ್ಥೆ, ಸಂಘಗಳಿಂದಲೂ ಸಹಾಯ ಕೇಳಿ ಜಯಂತಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು 2013ರಲ್ಲಿ ಕೆಂಪೇಗೌಡ ಜಯಂತಿಗೆ ಚಾಲನೆ ನೀಡಿದ್ದರು. ನಗರದಲ್ಲಿ 2015ರಲ್ಲಿ ನಡೆದ ಜಯಂತಿ ಆಚರಣೆ ಎಲ್ಲರಲ್ಲೂ ಸಂಚಲನ ಮೂಡಿಸಿತ್ತು. ಈ ಬಾರಿಯೂ ಉತ್ತಮವಾಗಿ ಸಂಘಟಿಸಬೇಕು, ಇಲ್ಲವಾದರೆ ಸಮುದಾಯಕ್ಕೆ ಶೋಭೆ ಎನಿಸುವುದಿಲ್ಲ ಎಂದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ನಾಡಪ್ರಭು ಕೆಂಪೇಗೌಡರ ರಥಯಾತ್ರೆಗೆ ಚಾಲನೆ ನೀಡಲಾಗುವುದು. ರಥಯಾತ್ರೆ ಸಾಗುವ ಮಾರ್ಗ ಹಾಗೂ ದಿನಾಂಕದ ಕುರಿತು ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಜತೆ ಚರ್ಚಿಸಿ ಅಂತಿಮಗೊಳಿಸಲು ತೀರ್ಮಾನಿಸಿದರು.
ಪಠ್ಯಪುಸ್ತಕಗಳ ಪರಿಷ್ಕರಣೆ ವೇಳೆ ಕೆಂಪೇಗೌಡ, ಕುವೆಂಪು, ಕೆಂಗಲ್ ಹನುಮಂತಯ್ಯ ಅವರ ವಿಷಯಗಳಿಗೆ ಸರ್ಕಾರ ಆದ್ಯತೆ ನೀಡಲಿ. ಹಿಂದಿನ ಸರ್ಕಾರ ಪಠ್ಯ ಪರಿಷ್ಕರಣೆಯಲ್ಲಿ ಕುವೆಂಪು ಅವರ ಕೆಲ ಬರಹಗಳನ್ನು ಕೈಬಿಟ್ಟಿದೆ. ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಅವರ ವಿವರಗಳಿಗೂ ಆದ್ಯತೆ ನೀಡಿಲ್ಲ, ಕೂಡಲೇ ಸರಿಪಡಿಸಬೇಕು ಎಂದು ಸಭೆಯಲ್ಲಿದ್ದವರು ಆಗ್ರಹಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಮರಿಸ್ವಾಮಿ, ಕಾರ್ಯದರ್ಶಿ ಚೇತನ್, ನಿರ್ದೇಶಕರಾದ ಸುಶೀಲಾ ನಂಜಪ್ಪ, ಸಿ.ನಾಗಣ್ಣ, ರವಿ, ಕೃಷ್ಣೇಗೌಡ, ಕುಮಾರಗೌಡ, ನಂಜನಗೂಡು ತಾಲೂಕು ಸಂಘದ ಅಧ್ಯಕ್ಷ ನರಸಿಂಹಸ್ವಾಮಿ, ಕೆ.ಆರ್.ನಗರ ತಾಲೂಕು ಸಂಘದ ಅಧ್ಯಕ್ಷ ಅಣ್ಣೇಗೌಡ, ಬಿಜೆಪಿ ಮುಖಂಡ ಕವೀಶ್‌ಗೌಡ, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್‌ಕುಮಾರ್‌ಗೌಡ, ಶಂಕರಣ್ಣ, ಮಹೇಶ್, ಎನ್.ಆರ್. ಮೊಹಲ್ಲಾ ಮುಖಂಡ ರಾಮಣ್ಣ, ಬಸವಸ್ವಾಮಿ, ಶೇಖರ್, ಸತೀಶ್‌ಗೌಡ, ಕಾರ್ತಿಕ್‌ಗೌಡ, ಪಿ.ಬೋರೇಗೌಡ ಇತರರು ಇದ್ದರು.