

ಚಿತ್ರದುರ್ಗ: ಭರತನಾಟ್ಯವನ್ನು ವಿಶ್ವಕ್ಕೆ ಪಸರಿಸಿದ ಭರತಮುನಿಯ ಕೊಡುಗೆಯನ್ನು ವಿದ್ಯಾರ್ಥಿಗಳು ನೃತ್ಯದ ಮೂಲಕ ಕಟ್ಟಿಕೊಟ್ಟರು. ಅಷ್ಟದಿಕ್ಬಾಲಕರನ್ನು ಸ್ಮರಿಸಿದ ನಂತರ ನಾಟ್ಯಕ್ಕೆ ಶುಭಾರಂಭ ದೊರೆಯಿತು. ಬೊಂಬೆ ನೃತ್ಯ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತು….
ತರಾಸು ರಂಗಮಂದಿರದಲ್ಲಿ ಭಾನುವಾರ ಶ್ರೀಅಂಜನಾ ನೃತ್ಯ ಕಲಾ ಕೇಂದ್ರದ ನೃತ್ಯೋತ್ಸವ-2024ರ ಅಂಗವಾಗಿ ನಡೆದ ನಾಟ್ಯ ನೈದಿಲೆಯ ಚಿತ್ರಣವಿದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟರಾಜ ಪೂಜೆಯೊಂದಿಗೆ ನೃತ್ಯಮಾಲಿಕಾಗೆ ಚಾಲನೆ ದೊರೆಯಿತು. ಸುಮಾರು ಎರಡ್ಮೂರು ತಾಸುಗಳ ಕಾಲ ವಿವಿಧ ವಯೋಮಾನದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ನೆರೆದಿದ್ದ ಪ್ರೇಕ್ಷಕರಿಗೆ ಕಲೆಯ ರಸದೌತಣ ಉಣಬಡಿಸಿದರು.
ನಂತರ ತಿರುಪತಿ ಗಿರಿವಾಸ ಎಂದು ಶ್ರೀನಿವಾಸನನ್ನು ಸ್ಮರಿಸುತ್ತ ವಿದ್ಯಾರ್ಥಿಗಳು ಕರುಣದಿ ಕಾಯೋ ಎಂದು ಪೊಡಮಟ್ಟರು. ಒಂದಕ್ಕಿಂತ ಮತ್ತೊಂದು ವೈವಿಧ್ಯಮಯ ನಾಟ್ಯಗಳು ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿದವು.
ಅಂತಿಮವಾಗಿ ಮೂಡಿಬಂದ ಐತಿಹಾಸಿಕ ಭೇಟಿ ಉತ್ಸವ ಚಿತ್ರದುರ್ಗದ ಶಕ್ತಿದೇವತೆಗಳ ಗತ ಇತಿಹಾಸವನ್ನು ಅನಾವರಣಗೊಳಿಸಿತು. ಅಕ್ಕ ಬರಗೇರಮ್ಮ, ತಂಗಿ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಯರ ಭೇಟಿ ಉತ್ಸವದ ಜಾನಪದ ರೂಪಕ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ವಿದುಷಿ ಡಾ. ನಂದಿನಿ ಶಿವಪ್ರಕಾಶ್ ನಿರ್ದೇಶನ ಹಾಗೂ ಪ್ರಭುದ್ಧ ಅಭಿನಯ, ಅದಕ್ಕೆ ಸರಿಸಮನಾಗಿ ನೃತ್ಯ ಪ್ರದರ್ಶಿಸಿದ ಕಲಾಕೇಂದ್ರದ ವಿದ್ಯಾರ್ಥಿಗಳು, ಚಿಕ್ಕ ಮಕ್ಕಳ ಮುಗ್ಧತೆ, ಕೊನೆಯಲ್ಲಿ ರಂಗ ಪ್ರವೇಶಿಸಿದ ಉರುಮೆ, ಡೊಳ್ಳು, ಅದರೊಂದಿಗೆ ಸಾಗಿ ಬಂದ ದೇವಿಯರು, ಈ ಎಲ್ಲವೂ ರಂಗಮಂದಿರದ ಕಳೆಯನ್ನೇ ಬದಲಿಸಿದವು.
ಶಿವಲಿಂಗಾನಂದ ಶ್ರೀ ಸಾನ್ನಿಧ್ಯವಹಿಸಿ ಮಾತನಾಡಿ, ಅಭಿನಯಕ್ಕೆ ಮುಂದಾದರೆ, ಪರಕಾಯ ಪ್ರವೇಶ ಮಾಡಿದಂತಿರಬೇಕು. ಅಂತಹ ನೃತ್ಯರೂಪಕ ಇಲ್ಲಿ ಕಂಡಿದ್ದೇವೆ. ನಾಟ್ಯ ನಮ್ಮೊಳಗಿನ ಅಂತಃ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಅದು ನೃತ್ಯಕ್ಕಿದೆ ಎಂದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಮಾತನಾಡಿ, ಈಗ ಲಲಿತ ಕಲೆಗಳಿಗೆ ರಾಜಾಶ್ರಯವಿಲ್ಲ. ಅದಕ್ಕಾಗಿ ಸರ್ಕಾರದ ಆಶ್ರಯ ಅಗತ್ಯವಿದೆ. ಕಲೆ, ಸಂಸ್ಕೃತಿ ಉಳಿಸುವ ಕೆಲಸವನ್ನು ಅಂಜನಾ ನೃತ್ಯ ಕಲಾಕೇಂದ್ರ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ವಿದುಷಿ ಮಾಧವಿ ಗೋಪಾಲಕೃಷ್ಣ, ವಿದ್ವಾನ್ ಅನಿಲ್‌ಕುಮಾರ್ ಅವರಿಗೆ ಅಂಜನಾ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೇಂದ್ರದ ಪ್ರಾಚಾರ್ಯ, ವಿದ್ವಾನ್ ಶಿವಪ್ರಕಾಶ್, ನಾಗರಾಜ್ ಇತರರಿದ್ದರು.