ಮೈಸೂರು: ಅರ್ಧನಾರೀಶ್ವರ ಕಲಾಭಿವೃದ್ಧಿ ಟ್ರಸ್ಟ್ ಮತ್ತು ರೇಣುಕಾಂಬ ಕಲಾ ಸಂಘದಿಂದ ಜು.11 ರವರೆಗೆ ನಗರದ ಪುರಭವನದಲ್ಲಿ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಪದಾಧಿಕಾರಿ ಸ್ವಪ್ನ ತಿಳಿಸಿದರು.
ಜು.7ರಿಂದ ನಾಟಕೋತ್ಸವ ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಆಗಮಿಸದೆ ಇರುವುದು ನಿರಾಶೆ ಉಂಟು ಮಾಡಿದೆ. ಪ್ರವೇಶ ಉಚಿತ ಇರುವುದರಿಂದ ಸಾರ್ವಜನಿಕರು ನಾಟಕಗಳನ್ನು ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಜು.9ರಂದು ಯಡಿಯೂರು ಸಿದ್ದಲಿಂಗೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯಿಂದ ದಕ್ಷಯಜ್ಞ, 10ರಂದು ಲಕ್ಷ್ಮೀನರಸಿಂಹಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಧರ್ಮರಾಜ್ಯ, 11ರಂದು ನುಗ್ಗೆಳಮ್ಮ ಕಲಾ ಸಂಘದಿಂದ ಕುರುಕ್ಷೇತ್ರ ನಾಟಕ ಪ್ರದರ್ಶನಗೊಳ್ಳಲಿವೆ. ನಿತ್ಯ ಬೆಳಗ್ಗೆ 11ಕ್ಕೆ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದರು.
ನಾಟಕಗಳನ್ನು ಪ್ರೋತ್ಸಾಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಕತ್ವ ನೀಡಲಾಗುತ್ತಿದೆ. ಆದರೆ, ನಾಟಕಕ್ಕೆ ಮೊದಲೇ ಹಣ ಬಿಡುಗಡೆ ಮಾಡಿದರೆ ನಾಟಕಗಳ ಆಯೋಜನೆಗೆ ಸಹಕಾರಿ ಆಗಲಿದೆ. ಆದ್ದರಿಂದ, ಈ ಬಗ್ಗೆ ಸರ್ಕಾರ ಗಮನ ನೀಡಬೇಕು ಎಂದು ಕೋರಿದರು. ಸಂಘಟಕರಾದ ಸವಿತಾ, ಚಂದ್ರೇಗೌಡ, ಬಸವರಾಜು ಹಾಜರಿದ್ದರು.