

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಿಬಿಟಿ ಎದುರಿನ ಜಾಗದಲ್ಲಿ ದಾವಣಗೆರೆಯ ಕೆ.ಬಿ.ಆರ್. ಡ್ರಾಮಾ ಕಂಪನಿಯಿಂದ ಪ್ರದರ್ಶನವಾಗುತ್ತಿರುವ ‘ಹೆಂಡತಿನ್ನ ಕೇಳಿ ಮದುವೆಯಾಗು’ ನಾಟಕದ 53ನೇ ಪ್ರದರ್ಶನ ಸಮಾರಂಭವನ್ನು ಜು. 15ರಂದು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ ಎಂದು ಕಂಪನಿ ಮುಖ್ಯ ವ್ಯವಸ್ಥಾಪಕ ಚಿಂದೋಡಿ ಶಂಭುಲಿಂಗಪ್ಪ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಸೇವಕಿ ಶಿವಲೀಲಾ ಕುಲಕರ್ಣಿ ಸಮಾರಂಭ ಉದ್ಘಾಟಿಸುವರು. ಅತಿಥಿಗಳಾಗಿ ಡಾ. ಮುರಳೀಧರ, ಪ್ರಭು ಗಂಗೇನಹಳ್ಳಿ, ಪ್ರಕಾಶ ಉಡುಕೇರಿ ಆಗಿಸಲಿದ್ದಾರೆ. ಸುಭಾಷ ಶಿಂಧೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಹೆಂಡತಿನ್ನ ಕೇಳಿ ಮದುವೆಯಾಗು ಎಂಬ ಹಾಸ್ಯ ಭರಿತ ನಾಟಕವು ಕುಟುಂಬ ಸಮೇತ ವೀಕ್ಷಿಸುವ ನಾಟಕವಾಗಿದೆ. ಈ ನಾಟಕದ ಬಳಿಕ ಕಂಪನಿಯಿಂದ ಇನ್ನೂ ಕೆಲ ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರಸಕ್ತ ನಾಟಕದ ಜತೆಗೆ ಮುಂದಿನ ದಿನಗಳಲ್ಲಿ ಪ್ರದರ್ಶನಗೊಳ್ಳುವ ಎಲ್ಲ ನಾಟಕಗಳನ್ನು ರಂಗಾಸಕ್ತರು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದಿಂದ ಕಲಾವಿದರಿಗೆ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಕಲಾವಿದರಿಗೆ 3 ಸಾವಿರ ರೂ. ಪ್ರೋತ್ಸಾಹ ನೀಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕರೊನಾ ನಂತರದಲ್ಲಿ ಕಲಾವಿದರು ಸಂಕಷ್ಟಕ್ಕೀಡಾಗಿದ್ದಾರೆ. ಆದಾಗ್ಯೂ ಸಹ ಸರ್ಕಾರಗಳು ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಿಂದೋಡಿ ಶ್ರೀಕಂಠೇಶ, ಚಿಂದೋಡಿ ವಿಜಯಕುಮಾರ, ಪ್ರಭು ಹಂಚಿನಾಳ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.