

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿಯ ಜೀವಿ ಕಲಾ ಬಳಗವು ಗಂಗಾವತಿ ಸಿಲ್ಕ್ ಪ್ಯಾಲೇಸ್ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೆ. 3ರಿಂದ 9ರವರೆಗೆ 7 ನಾಟಕಗಳ ‘ನಾಟಕ ಸಪ್ತಾಹ’ ಏರ್ಪಡಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಗದಿಗೆಯ್ಯ ಹಿರೇಮಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 3ರಂದು ಸಂಕೆ 5.30ಕ್ಕೆ ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಸಪ್ತಾಹ ಉದ್ಘಾಟಿಸುವರು. ಉದಯ ದೇಸಾಯಿ, ಬಸಯ್ಯ ಹಿರೇಮಠ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ ಅತಿಥಿಗಳಾಗಿ ಆಗಮಿಸುವರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ನಂತರ ಗದಿಗೆಯ್ಯ ಹಿರೇಮಠ ವಿರಚಿತ ‘ನಂಬಿಕೆ ಫಲ’ ನಾಟಕ ಪ್ರದರ್ಶನವಾಗಲಿದೆ ಎಂದರು.
ಸೆ. 4ರಂದು ಸಂಜೆ 5.30ಕ್ಕೆ ಜಿ.ಆರ್. ಸಂಗಮೇಶ ವಿರಚಿತ ವೀರ ಸಿಂಧೂರ ಲಕ್ಷ್ಮಣ ನಾಟಕ ಪ್ರದರ್ಶನಗೊಳ್ಳಲಿದ್ದು, ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು. ಸುಭಾಷ ಶಿಂಧೆ ಅತಿಥಿಯಾಗಿ ಪಾಲ್ಗೊಳ್ಳುವರು. ಸೆ. 5ರಂದು ಸಂಜೆ 5.30ಕ್ಕೆ ತಾಯಿಯ ಕರುಳು ನಾಟಕ ಪ್ರದರ್ಶನವಾಗಲಿದ್ದು, ಶಿವಲೀಲಾ ಕುಲಕರ್ಣಿ ಉದ್ಘಾಟಿಸುವರು ಎಂದರು.
ಸೆ. 6ರಂದು ಸಂಜೆ 5.30ಕ್ಕೆ ಕುರುಕ್ಷೇತ್ರ ನಾಟಕ ಪ್ರದರ್ಶನವಾಗಲಿದ್ದು, ಪಂ. ಎಂ. ವೆಂಕಟೇಶಕುಮಾರ ಉದ್ಘಾಟಿಸುವರು. ಸೆ. 7ರಂದು ಸಂಜೆ 5.30ಕ್ಕೆ ತಲಾಷ್ ನಾಟಕಕ್ಕೆ ಸಿ.ಕೆ. ರಾಮೇಗೌಡ ಚಾಲನೆ ನೀಡುವರು. ಸೆ. 8ರಂದು ಸಂಜೆ 5.30ಕ್ಕೆ ವಚನಬ್ರಹ್ಮ ದಾಸಿಮಯ್ಯ ನಾಟಕ ಪ್ರದರ್ಶನಗೊಳ್ಳಲಿದ್ದು, ಮೇಯರ್ ವೀಣಾ ಭಾರದ್ವಾಡ ಉದ್ಘಾಟಿಸುವರು ಎಂದರು.
ಸೆ. 9ರಂದು ಸಂಜೆ 5.30ಕ್ಕೆ ಬಾರದು ಬಪ್ಪದು ನಾಟಕ ಪ್ರದರ್ಶನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಚಾಲನೆ ನೀಡುವರು. ನಂತರ ಆಯೋಜಿಸಿರುವ ಸಮಾರೋಪ ಸಮಾರಂಭದಲ್ಲಿ ಡಾ. ಸಂಗಮನಾಥ ಲೋಕಾಪು ಸಮಾರೋಪ ನುಡಿಗಳನ್ನಾಡುವರು. ಡಾ. ಶರಣಪ್ಪ ಕೊಟಗಿ, ಶಾಂತಣ್ಣ ಕಡಿವಾಳ, ವಿ.ಜಿ. ಪಾಟೀಲ, ಲಿಂಗರಾಜ ಅಂಗಡಿ, ಪ್ರಕಾಶ ಉಡಿಕೇರಿ, ಮಂಜುನಾಥ ಹಗೇದಾರ ಉಪಸ್ಥಿತರಿರುವರು. ಡಾ. ಗೋವಿಂದ ಮಣ್ಣೂರ ಅಧ್ಯಕ್ಷತೆ ವಹಿಸಲಿದ್ದಾರೆ. 7 ದಿನಗಳ ಕಾಲದ ನಾಟಕೋತ್ಸವದಲ್ಲಿ ಕವಿ, ಕಲಾವಿದರು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ಡಾ. ರಾಮು ಮೂಲಗಿ, ಸಿ.ಎಸ್. ಪಾಟೀಲ ಕುಲಕರ್ಣಿ, ಎ.ಐ. ಮೇವುಂಡಿ, ಶಿವಾನಂದ ಬೆಂಗೇರಿ, ಇತರರು ಇದ್ದರು.