

ಮೈಸೂರು: ನಾಟಕ ಜೀವನ ಹಾಳು ಮಾಡುವುದಿಲ್ಲ, ಬದಲಿಗೆ ಕಲೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಅಭಿಪ್ರಾಯಪಟ್ಟರು.
ಹೊಸಮಠದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಮಂಗಳವಾರ ಬಿ.ವಿ.ಕಾರಂತ ಕಾಲೇಜು ರಂಗ ತರಬೇತಿ ಶಿಬಿರ ಮತ್ತು ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ಮನುಷ್ಯನಿಗೆ ಸುಸಂಸ್ಕೃತಿ ತಂದುಕೊಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಎಲ್ಲ ಗುಣಗಳೂ ನಮ್ಮೊಳಗಿವೆ. ಅದನ್ನು ಸರಿಯಾದ ಸಮಯದಲ್ಲಿ, ಪ್ರಮಾಣದಲ್ಲಿ ಬಳಸಬೇಕು. ಆಗ ಮಾತ್ರ ಸಮಾಜಕ್ಕೆ ಒಳಿತು. ನಾಟಕ ಜೀವನ ಹಾಳು ಮಾಡುವುದಿಲ್ಲ, ಬದಲಿಗೆ ಕಲೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ ಎಂದು ತಿಳಿಸಿದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ ಮಾತನಾಡಿ, ನಾಟಕ ವ್ಯಂಗ್ಯವಲ್ಲ, ಅದು ಜಂಗಮ ರೂಪವಾದದ್ದು. ಸಮಾಜದ ಅರಿವು ಮತ್ತು ಸಂಸ್ಕಾರವನ್ನು ಶಿಕ್ಷಣ ಮಾತ್ರವಲ್ಲದೆ, ಕಲೆ ಕಲಿಸಿಕೊಡುತ್ತದೆ ಎಂದು ಹೇಳಿದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ನಾಟಕಗಳು ಜೀವನದ ವಿವಿಧ ಆಯಾಮಗಳನ್ನು ತಿಳಿಸುತ್ತವೆ. ಹಾಗಾಗಿ ಕಲೆ, ಸಾಹಿತ್ಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ‘ಸೋರುತಿಹುದು ಸಂಬಂಧ’ ಎಂಬ ನಾಟಕ ಪ್ರದರ್ಶನವಾಯಿತು. ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಎನ್.ಜಿ.ಲೋಕೇಶ್, ಶಿಬಿರದ ನಿರ್ದೇಶಕ ಪ್ರವೀಣ್ ಬೆಳ್ಳಿ, ಬಿ.ವಿ.ಕಾರಂತ ಕಾಲೇಜು ರಂಗ ತರಬೇತಿ ಶಿಬಿರದ ಸಂಚಾಲಕಿ ಎಂ.ಎಸ್.ಸಂಧ್ಯಾರಾಣಿ ಇತರರು ಇದ್ದರು.