ನಾಟಕ ಕಂಪನಿಗಳ ಅನುದಾನ ಕಸಿದ ಗ್ಯಾರಂಟಿ

march 27 kottur 01
Published on

ಕೊಟ್ಟೂರು: ದ್ವಂದ್ವ ಸಂಭಾಷಣೆ ರಹಿತ ಹಾಸ್ಯ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕಗಳನ್ನು ಜನರು ವೀಕ್ಷಿಸಿ ಪ್ರೋತ್ಸಾಹಿಸುತ್ತಾರೆ ಎಂದು ನಾಟಕ ಅಕಾಡೆಮಿ ಸದಸ್ಯ, ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘದ ಮಾಲೀಕ ಜೀವರ್ಗಿ ರಾಜಣ್ಣ ಹೇಳಿದರು.

ಪಟ್ಟಣದಲ್ಲಿ ಶ್ರೀ ಗುರು ಪುಟ್ಟರಾಜ ನಾಟ್ಯ ಸಂಘ ಗದಗ ಹಾಗೂ ಶ್ರೀ ಕುಮಾರ ವಿಜಯ ನಾಟಕ ಸಂಘ ಚಿತ್ತರಗಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಈ ಮೊದಲು ರಾಜ್ಯದಲ್ಲಿ ಎಪ್ಪತ್ತರಿಂದ ಎಂಬತ್ತು ವೃತ್ತಿ ನಾಟಕ ಕಂಪನಿಗಳಿದ್ದವು. ಈಗ ಬೆರಳೆಣಿಕೆಯಷ್ಟು ಉಳಿದಿವೆ. ಪ್ರತಿ ವರ್ಷ ಎರಡು ಕಂಪನಿಗಳು ನೇಪಥ್ಯಕ್ಕೆ ಸೇರುತ್ತಿವೆ ಎಂದರು.

ಗ್ಯಾರಂಟಿ ಯೋಜನೆಗಳು ನಾಟಕ ಕಂಪನಿಗಳ ಅನುದಾನ ಕಸಿದುಕೊಂಡಿವೆ. ನಾಟಕಗಳನ್ನು ಮಹಿಳೆಯರು ತಲೆ ಎತ್ತಿ ನೋಡುವಂತ್ತಿರಬೇಕೇ ಹೊರತು ತಲೆ ತಗ್ಗಿಸುವಂತಿರಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಕೆ.ಬಿ.ಆರ್. ನಾಟಕ ಕಂಪನಿ ಮಾಲೀಕ ಚಿಂದೋಡಿ ಶ್ರೀಕಂಠೇಶ ಮಾತನಾಡಿ, ವೃತ್ತಿ ನಾಟಕ ಕಂಪನಿಗಳ ಪ್ರದರ್ಶನದಲ್ಲಿ ಪ್ರೇಕ್ಷಕರು ತುಂಬಿದ್ದರೆ, ದಿನವೂ ರಂಗಭೂಮಿ ದಿನಾಚರಣೆಯಾಗಲಿದೆ. ಸರ್ಕಾರ ವಿವಿಧ ಉತ್ಸವಗಳಿಗೆ ಖರ್ಚು ಮಾಡುವ ಹಣದ ಅರ್ಧ ಭಾಗವನ್ನು ಕಂಪನಿ ನಾಟಕಗಳಿಗೆ ನೀಡಿದರೆ, ನಾಟಕ ಕಲೆ ಜೀವಂತವಾಗಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು ಎಂದರು.

ಡಾ.ರಾಜಕುಮಾರ್ ಸೇರಿದಂತೆ ಪ್ರಸಿದ್ಧ ಸಿನಿಮಾ ನಟರು ಅಭಿನಯಿಸಿದ ಹೆಗ್ಗಳಿಕೆ ನಮ್ಮ ಕೆ.ಬಿ.ಆರ್. ಕಂಪನಿಗಿದೆ. ಈ ಕಂಪನಿ ಆರಂಭಿಸಿ 98 ವರ್ಷವಾಗಿದೆ. ಇಡೀ ವಿಶ್ವದಲ್ಲಿ ಸತತ ನೂರು ವರ್ಷ ನಾಟಕ ಪ್ರದರ್ಶನ ನೀಡಿದ ಕಂಪನಿ ನಮ್ಮದು ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಕೊಟ್ಟೂರಿನಲ್ಲೇ ಈ ಕಂಪನಿ ಹುಟ್ಟಿದ್ದು ಮತ್ತೊಂದು ವಿಶೇಷ ಎಂದು ಚಿಂದೋಡಿ ಶ್ರೀಕಂಠೇಶ ತಿಳಿಸಿದರು.

ಹಿರಿಯ ಕಲಾವಿದರಾದ ಡಿ.ಕೊಟ್ರೇಶ, ಕೋಗಳಿ ಶಂಕ್ರಯ್ಯ ಅವರನ್ನು ಸನ್ಮಾನಿಸಲಾಯಿತು. ವಿಜಯನಗರ ಜಿಲ್ಲೆ ನಾಟಕ ಅಕಾಡೆಮಿ ಸಂಚಾಲಕ ಮತ್ತಿಹಳ್ಳಿ ಪ್ರಕಾಶ, ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ಮರಿಸ್ವಾಮಿ, ಕಲಾವಿದರಾದ ಸುಧಾಕರ ಪಟೇಲ್, ಪಾಪು ಕಲ್ಲೂರು, ಮಂಜುನಾಥ ಜಾಲಿಹಾಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net