ನಾಗೇಂದ್ರನಮಟ್ಟಿಯಲ್ಲಿ ಮನೆಗೆ ನುಗ್ಗಿದ ಮಳೆ ನೀರು

19-hvr-04a
Published on

ಹಾವೇರಿ: ನಗರದ ನಾಗೇಂದ್ರನಮಟ್ಟಿಯ 6ನೇ ಕ್ರಾಸ್​ನಲ್ಲಿ ಚರಂಡಿ ಬ್ಲಾಕ್ ಆದ ಪರಿಣಾಮ ಶನಿವಾರ ರಾತ್ರಿ ಸುರಿದ ಮಳೆಯ ನೀರು ಅಕ್ಕಪಕ್ಕದ ಐದಾರು ಮನೆಗಳಿಗೆ ನುಗ್ಗಿದೆ.

ನಗರಸಭೆಯ 3 ಮತ್ತು 5ನೇ ವಾರ್ಡ್ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಹಲವು ಮನೆಗಳು ಚರಂಡಿಗಿಂತ ತಗ್ಗು ಪ್ರದೇಶದಲ್ಲಿವೆ. ಚರಂಡಿಯ ನೀರು ಸರಾಗವಾಗಿ ಹರಿದು ಹೋಗಲು ಇಲ್ಲಿ ನಗರಸಭೆಯವರು ಕಾಲಕಾಲಕ್ಕೆ ಸ್ವಚ್ಛತೆ ಕಾರ್ಯವನ್ನು ಕೈಗೊಂಡಿಲ್ಲ. ಅಲ್ಲದೆ, ಅಲ್ಲಿನ ನಿವಾಸಿಯೊಬ್ಬರು ಮನೆ ನಿರ್ಮಾಣ ಕಾಮಗಾರಿ ನಡೆಸಿದ್ದು, ಮನೆ ಕೆಡವಿದ ಮಣ್ಣನ್ನೆಲ್ಲ ಚರಂಡಿಯ ಮೇಲೆಯೇ ಸುರಿದಿದ್ದಾರೆ. ಇದರಿಂದಾಗಿ ಶನಿವಾರ ರಾತ್ರಿ ಸುರಿದ ಮಳೆಯ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೇ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಅಲ್ಲಿನ ನಿವಾಸಿಗಳು ರಾತ್ರಿಯಿಡಿ ಪರದಾಡಿದ್ದಾರೆ. ಚರಂಡಿಯ ಹೊಲಸು ನೀರೆಲ್ಲ ಮನೆಯೊಳಗೆ ನುಗ್ಗಿ ಸಂಕಷ್ಟ ಅನುಭವಿಸಿದ್ದಾರೆ.

ಬೆಳಗ್ಗೆ ನಗರಸಭೆಯಿಂದ ಪೌರಕಾರ್ವಿುಕರು ಬಂದಿದ್ದರಾದರೂ ಅಲ್ಪಸ್ವಲ್ಪ ಚರಂಡಿ ಸ್ವಚ್ಛಗೊಳಿಸಿ, ಮಣ್ಣಿನ ಗುಡ್ಡೆಯನ್ನು ತೆರವುಗೊಳಿಸಲು ಜೆಸಿಬಿ ಬೇಕು ಎಂದು ಮರಳಿ ಹೋಗಿದ್ದಾರೆ. ನಗರಸಭೆ ಸದಸ್ಯರು, ಅಧಿಕಾರಿಗಳು ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಮತ್ತೆ ಮಳೆ ಬಂದರೆ ನೀರು ನುಗ್ಗುತ್ತದೆ. ಕೂಡಲೆ ನಗರಸಭೆಯವರು ಚರಂಡಿ ಸ್ವಚ್ಛತೆಯನ್ನು ಕೈಗೊಳ್ಳಬೇಕು ಎಂದು ಸ್ಥಳೀಯರಾದ ಸಾಧಿಕ ಹುಲಗೂರ, ದಸ್ತಗೀರ ಮುಜಾವರ, ರೇಣವ್ವ ಕಾಯಕದ, ಸರದಾರಅಹ್ಮದ ಅಕ್ಕಿವಳ್ಳಿ, ನೂರಹ್ಮದ ಮುಲ್ಲಾ ಇತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net