

ಚಿತ್ತಾಪುರ: ಮಹಾನ್ ಶಕ್ತಿ ದೇವತೆ, ರಾಷ್ಟçಕೂಟರ ಕುಲದೇವತೆ ನಾಗಾವಿಯ ಶ್ರೀ ಯಲ್ಲಮ್ಮ ದೇವಿಯ ಜಾತ್ರೋತ್ಸವ ಅ.17ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ನಾಗಾವಿ ಯಲ್ಲಮ್ಮ ದೇವಿ ಜಾತ್ರೋತ್ಸವ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅ.3ರಂದು ನವರಾತ್ರಿ ಉತ್ಸವ ಆರಂಭವಾಗಲಿದ್ದು, 9 ದಿನಗಳವರೆಗೆ ದೇವಿಗೆ ವಿಶೇಷ ಪೂಜೆ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅ.17ರಂದು ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ಅದ್ದೂರಿ ಪಲ್ಕಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಸುಗಮ ಸಂಚಾರ, ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಭಕ್ತರಿಗೆ ಅಗತ್ಯ ಮಾರ್ಗದರ್ಶನ ನೀಡಲು ಸ್ವಯಂ ಸೇವಕರು ಅವಶ್ಯವಿದ್ದು, ಯಾರಾದರೂ ಮುಂದೆ ಬಂದರೆ ಪಾಸ್ ನೀಡಲಾಗುವುದು ಎಂದು ಹೇಳಿದರು.
ಮುಖಂಡ ರತ್ನಾಕರ ನಾಯಕ ಮಾತನಾಡಿ, ಈ ಹಿಂದೆ ಪಲ್ಲಕ್ಕಿ ಮೆರವಣಿಗೆ ಸಂದರ್ಭದಲ್ಲಿ ಜನರ ನೂಕು ನುಗ್ಗಲಿನಿಂದ ಪಲ್ಲಕ್ಕಿ ಭಗ್ನಗೊಂಡಿತ್ತು. ಈ ಬಾರಿ ಎಚ್ಚರಿಕೆ ವಹಿಸಬೇಕು. ಪಲ್ಲಕ್ಕಿ ಸುತ್ತಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು.
ಆನಂದ ರಾವೂರಕರ್ ಮಾತನಾಡಿ, ದೇವಸ್ಥಾನಕ್ಕೆ ಅಚ್ಚುಕಟ್ಟಾಗಿ ದೀಪಾಲಂಕಾರ ಮಾಡಲಾಗುವುದು. ಅಲ್ಲದೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಅನುಮತಿ ನೀಡಬೇಕು ಎಂದು ಕೋರಿದರು. ಚಂದರ ಚವ್ಹಾಣ್ ಮಾತನಾಡಿ, ಜಾತ್ರೆಯಲ್ಲಿ ನಾಗಾವಿ ನಾಡು ನಾಟ್ಯ ಸಂಘದ ಉದ್ಘಾಟನೆ ಮಾಡಲಾಗುವುದು. ಅಲ್ಲದೆ ಉಚಿತ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅಗತ್ಯ ಸ್ಥಳದ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಈರಪ್ಪ ಬೋವಿ ಮಾತನಾಡಿ, ಪಟ್ಟಣದಿಂದ ನಾಗಾವಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದಿ, ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಪುರಸಭೆ ಸದಸ್ಯ ಚಂದ್ರಶೇಖರ ಕಾಶಿ, ಮುಖಂಡರಾದ ಮಲ್ಲರೆಡ್ಡಿ ಗೋಪಶೇನ್, ಬಾಬು ಕಾಶಿ, ಭೀಮು ಹೋಳಿಕಟ್ಟಿ, ಶರಣಪ್ಪ ನಾಟಿಕಾರ್, ಸುರೇಶ ಬೆನಕನಳ್ಳಿ, ವಿಠ್ಠಲ್ ಕಾಶಿ, ಪ್ರಲ್ಹಾದ್ ವಿಶ್ವಕರ್ಮ, ಸಂಜಯ್ ಕಾಶಿ, ಭೀಮಸಿಂಗ್ ಚವ್ಹಾಣ್, ವಿಜಯಕುಮಾರ ಚವ್ಹಾಣ್ ಮಾತನಾಡಿದರು.
ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಅಧಿಕಾರಿಗಳಾದ ಬಾಲಕೃಷ್ಣ, ಶಿರಸ್ತೆದಾರ ಅಶ್ವತ್ಥನಾರಾಯಣ ಕುಲಕರ್ಣಿ, ಪಿಎಸ್‌ಐ ಚಂದ್ರಾಮಪ್ಪ, ಕಾರ್ಯದರ್ಶಿ ಮಾರ್ಥಂಡಪ್ಪ, ಪ್ರಮುಖರಾದ ನಾಗಪ್ಪ ಪೂಜಾರಿ, ಗೌತಮ ನಾಯಕ್, ನರಸಪ್ಪ ಬೋವಿ, ಬಸವರಾಜ ಬಿರಾದಾರ ಇತರರಿದ್ದರು.