ನಾಗರಿಕರ ಸಹಕಾರದೊಂದಿಗೆ ಮೇಲುಕೋಟೆ ಅಭಿವೃದ್ಧಿ

ಮೇಲುಕೋಟೆಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು. ಸೋಮಶೇಖರ್, ಲೋಕೇಶ್‌ಮೂರ್ತಿ, ಮಹೇಶ್, ರಮೇಶ್ ಇದ್ದರು.
2mlk1
Published on

ಮೇಲುಕೋಟೆ: ಎಲ್ಲ ನಾಗರಿಕರ ಸಹಕಾರದೊಂದಿಗೆ ಮೇಲುಕೋಟೆ ಅಭಿವೃದ್ಧಿ ಮಾಡಲಾಗುವುದು. ಅಭಿವೃದ್ಧಿ ವೇಳೆ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.


ಮೇಲುಕೋಟೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ನಾಗರಿಕರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಸರ್ವೇ ನಂಬರ್ 16ರ ಜಮೀನು ಚೆಲುವನಾರಾಯಣಸ್ವಾಮಿ ದೇವಾಲಯದ ಆಸ್ತಿಯಾಗಿದ್ದು ಇಲ್ಲಿ 41 ವಾಸದ ಮನೆಗಳು ಗ್ರಾಮ ಪಂಚಾಯಿತಿ ಖಾತೆ ಹೊಂದಿ ಗ್ರಾಪಂನ ಅನುಮತಿಯೊಂದಿಗೆ ನಿರ್ಮಾಣವಾಗಿವೆ. ಇಂತಹ ಮನೆಗಳಿಗೆ ಕಾನೂನು ಅಡಿಯಲ್ಲಿ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು. ಸಾಧ್ಯವಾಗದಿದ್ದರೆ ಪರ್ಯಾಯವಾಗಿ ವ್ಯವಸ್ಥೆ ಮಾಡುತ್ತೇನೆ. ಈ ವಿಚಾರದಲ್ಲಿ ಮುಜರಾಯಿ ಇಲಾಖೆ ಮತ್ತು ಜಿಲ್ಲಾಧಿಕಾರಿ ಅವರು ಕೈಗೊಳ್ಳುವ ಕ್ರಮ ಅಂತಿಮವಾಗಲಿದೆ ಎಂದರು.


ಸರ್ವೇ ನಂಬರ್ 15ರಲ್ಲಿ 44ಕ್ಕೂ ಹೆಚು ್ಚಮನೆಗಳು ನಿರ್ಮಾಣವಾಗಿವೆ. ಈ ಸರ್ವೇ ನಂಬರ್ ಅರಣ್ಯ ಇಲಾಖೆಗೆ ಸೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲೂ ಕೆಲವು ಮನೆಗಳು ಗ್ರಾಪಂ ಅನುಮತಿ ಖಾತೆ ಹೊಂದಿ ನಿರ್ಮಾಣವಾದರೆ, ಕೆಲವು ಅಕ್ರಮವಾಗಿ ನಿರ್ಮಾಣವಾಗಿವೆ. ಸರ್ವೇ ನಂಬರ್ 15ರಲ್ಲಿ ಅಕ್ರಮ ನಿರ್ಮಾಣಗಳನ್ನು ತಡೆಗಟ್ಟಲು ಸೂಚನೆ ನೀಡಲಾಗಿದೆ. ಬಹಳ ವರ್ಷಗಳಿಂದ ವಾಸವಾಗಿರುವ ಮನೆಗಳಿಗೆ 94ಸಿ ಅಡಿಯಲ್ಲಿ ಅನುಕೂಲ ಕಲ್ಪಿಸಲು ಅವಕಾಶ ಇದೆಯಾ? ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ. ಏನೇ ಆದರೂ ಯಾರಿಗೂ ಅನ್ಯಾಯವಾಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.


ಇದಕ್ಕೂ ಮುನ್ನ ಗ್ರಾಮ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು, ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿ, ದೇವಾಲಯದ ಸುತ್ತ ಕಾಂಕ್ರೀಟ್‌ರಸ್ತೆ ನಿರ್ಮಾಣ ಆರಂಭಿಸಿ, ಪರ್ಯಾಯ ವ್ಯವಸ್ಥೆ ಇಲ್ಲದೆ ಅಂಗಡಿ ಮುಂಗಟ್ಟುಗಳನ್ನು ತೆಗೆದರೆ ಬಡವರಿಗೆ ಅನ್ಯಾಯವಾಗುತ್ತದೆ. ದೇವಾಲಯದ ಅಕ್ಕಪಕ್ಕವೇ ನಮ್ಮ ಅಂಗಡಿಗೆ ವ್ಯವಸ್ಥೆ ಮಾಡಿಕೊಡಿ. ಕಲ್ಯಾಣಿ ಸ್ವಚ್ಛತೆಗೆ ಆದ್ಯತೆ ನೀಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಸರ್ವೇ ನಂಬರ್ 16ರಲ್ಲಿ ಗ್ರಾಮ ಪಂಚಾಯಿತಿ ಪರವಾನಗಿಯೊಂದಿಗೆ ನಿರ್ಮಿಸಿರುವ ಮನೆಗಳಿಗೆ ತೊಂದರೆಯಾಗದಂತೆ ಕ್ರಮವಹಿಸಿ ಎಂದು ಸ್ಥಳೀಯರು ಶಾಸಕರ ಗಮನ ಸೆಳೆದರು.
ಇದಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಮೇಲುಕೋಟೆಯಲ್ಲಿ ಉಳಿದಿರುವ ಜಮೀನುಗಳ ಸರ್ವೇ ಮಾಡಬೇಕು. ದೇವಾಲಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇಲಾಖೆಗೆ ಸೇರಿದ ಜಮೀನು ಗಡಿಗಳನ್ನು ಗುರುತಿಸಿ ತಂತಿ ಬೇಲಿ ಹಾಕಿಕೊಳ್ಳಬೇಕು. ವಿವಿಧ ಇಲಾಖೆ ಅಧಿಕಾರಿಗಳು ಮೇಲುಕೋಟೆ ಅಭಿವೃದ್ಧಿಗೆ ಒಂದು ವಾರದಲ್ಲಿ ಯೋಜನೆ ತಯಾರಿಸಿ ದೇವಾಲಯದ ಇಒ ಮೂಲಕ ಸಲ್ಲಿಸಬೇಕು ಎಂದರು.


ಗ್ರಾಮ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಹಾಗೂ ಸದಸ್ಯರು ತಾಲೂಕು ಪಂಚಾಯಿತಿ ಇಒ ಲೋಕೇಶಮೂರ್ತಿ ದೇವಾಲಯದ ಅಧಿಕಾರಿ ಮಹೇಶ್, ಗ್ರಾಮ ಆಡಳಿತಾಧಿಕಾರಿ ರಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್, ಸೆಸ್ಕ್ ಇಂಜಿನಿಯರ್ ಸತೀಶ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net