ನಾಗರಿಕತೆ ಉಳಿವಿಗೆ ಜಾನಪದ ಅತ್ಯಗತ್ಯ

Folklore is essential to the survival of civilization
ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ದತ್ತಿ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಡಾ. ಎಸ್.ಟಿ. ಮೆಹರವಾಡಿ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಉಪನ್ಯಾಸಕಿ ಡಾ. ಸವಿತಾ ಝಳಕಿ, ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್. ಮಾಗಣಗೇರಿ, ನಿವೃತ್ತ ಪ್ರಾಂಶುಪಾಲ ಪ್ರೊ. ಶಿವಾನಂದ ನುಚ್ಚಿ ಇತರರು ಇದ್ದರು.
Published on

ವಿಜಯಪುರ: ಜಾನಪದ ಸಾಹಿತ್ಯ ನಮ್ಮೆಲ್ಲರ ಉಸಿರಾಗಿದೆ. ಅದನ್ನೇ ಮರೆತರೆ ನಾಗರಿಕತೆಯ ಅವನತಿ ಆಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಎಸ್.ಟಿ. ಮೆಹರವಾಡಿ ಹೇಳಿದರು.

ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ದಿ. ಕುಂತಿದೇವಿ ಚಂದಪ್ಪ ಅಕ್ಕಲಕೋಟ (ದತ್ತಿ ದಾನಿ: ರಂಗನಾಥ ಚಂದಪ್ಪ ಅಕ್ಕಲಕೋಟ) ಹಣಮಂತ ಸಂಕನಾಳ (ದತ್ತಿ ದಾನಿ:ಡಾ. ಯಲಗೂರೇಶ್ವರ ಸಂಕನಾಳ) ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಜಾನಪದ ಜೀವನಮೌಲ್ಯ ಮರೆತರೆ ಸರ್ವಸ್ವವನ್ನೂ ಕಳೆದುಕೊಂಡಂತೆ ಎಂದು ಹೇಳಿದರು.

ಅರ್ಜುಣಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಸವಿತಾ ಝಳಕಿ ‘ಜಾನಪದ ನಡೆದು ಬಂದ ದಾರಿ ಹಾಗೂ ಗರತಿಯ ಹಾಡುಗಳು’ ಕುರಿತು ಮಾತನಾಡಿ, ಆಧುನಿಕ ಸಮಾಜದಲ್ಲಿ ಜಾನಪದ ಪರಂಪರೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ತಾಯಿ-ಮಗುವಿನ ಸಂಬಂಧ ಹೇಳತೀರದು. ಗಂಡನ ಮನೆ ಲೇಸು ಎನ್ನುವ ವಿಚಾರವೇ ಅರ್ಥಪೂರ್ಣ. ಗರತಿಯ ಜೀವನದಲ್ಲಿ ಬಡತನ, ಶ್ರೀಮಂತಿಕೆ ಮುಖ್ಯವಲ್ಲ. ಅವಳಿಗೆ ಗಂಡನ ಮನೆಯೇ ಮಹತ್ವದ್ದು ಎಂದರು.

ಚಡಚಣದ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್. ಮಾಗಣಗೇರಿ ‘ಮರೆಯಾಗುತ್ತಿರುವ ಜಾನಪದ ಸಂಸ್ಕೃತಿ’ ವಿಷಯವಾಗಿ ಮಾತನಾಡಿ, ಜಾನಪದ ಸಾಹಿತ್ಯ ಉಳಿಸುವ ಪ್ರಯತ್ನವನ್ನು ಎಲ್ಲರೂ ಪ್ರಾಮಾಣಿಕವಾಗಿ ಮಾಡಬೇಕಿದೆ. ರೈತರು ಜಾನಪದ ಸಂಸ್ಕೃತಿಯ ರೂವಾರಿಯಾಗಿದ್ದು, ಅವರು ಆಧುನಿಕ ಜೀವನಕ್ಕೆ ಮಾರುಹೋಗುತ್ತಿದ್ದು, ಜಾನಪದ ಹಾಡುಗಳು ನಶಿಸಿ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪ್ರೊ. ಶಿವಾನಂದ ನುಚ್ಚಿ ಮಾತನಾಡಿ, ಜಾನಪದ ಸಂಸ್ಕೃತಿ ಉಳಿಯದೆ ಹೋದರೆ ಸಮಾಜದಲ್ಲಿ ಗೌರವದ ಜೀವನ ಕಾಣಸಿಗುವುದಿಲ್ಲ ಎಂದರು.

ಅಕ್ಕಮಹಾದೇವಿ ಬುರ್ಲಿ, ಸಾಹಿತಿ ರಂಗನಾಥ ಅಕ್ಕಲಕೋಟ, ಆಶಾ ಬಸನಗೌಡ ಬಿರಾದಾರ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಬಸನಗೌಡ ಬಿರಾದಾರ, ಶರಣಗೌಡ ಪಾಟೀಲ, ಸಿದ್ರಾಮಯ್ಯ ಲಕ್ಕುಂಡಿಮಠ, ಅನ್ನಪೂರ್ಣ ಬೆಳೆನ್ನವರ, ಶಾಂತಾ ವಿಭೂತಿ, ಇಂದಿರಾ ಬಿದರಿ, ಅಹಮ್ಮದ ವಾಲಿಕಾರ, ಪ್ರೊ. ಎಸ್.ಕೆ. ಬಿರಾದಾರ, ಡಾ. ಮಾಧವ ಗುಡಿ, ಡಾ. ವಿ.ಎಂ. ಬಾಗಾಯತ, ಕಮಲಾ ಮುರಾಳ, ರಾಜೇಸಾಬ ಶಿವನಗುತ್ತಿನ, ಡಾ. ಸುರೇಶ ಕಾಗಲಕರ ಇತರರಿದ್ದರು.

ಸುನಂದಾ ಕೋರಿ, ಮಹೇತಾಬ ಕಾಗವಾಡ, ಸಾಹೇಬಣ್ಣ ಮಾದರ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಸುಖದೇವಿ ಅಲಬಾಳಮಠ ಪ್ರಾರ್ಥಿಸಿದರು. ಸುರೇಶ ಜತ್ತಿ ಸ್ವಾಗತಿಸಿದರು. ಸಾಹಿತಿ ವಿಜಯಲಕ್ಷ್ಮಿ ಹಳಕಟ್ಟಿ ನಿರೂಪಿಸಿದರು. ಯಮನಪ್ಪ ಪವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net