

ವಿಜಯವಾಣಿ ಸುದ್ದಿಜಾಲ ಬೀದರ್
ನಾಗರಿಕ ಸೇವೆ (ಸಿವಿಲ್ ಸರ್ವಿಸಸ್) ಪರೀಕ್ಷೆಗೆ ಸಜ್ಜುಗೊಳಿಸಲು ಪೂರಕವಾಗಿ ಜಿಲ್ಲಾಡಳಿತ ಶನಿವಾರ ಇಲ್ಲಿಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಗಾರ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಭರವಸೆಯ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದೆ. ಐದು ಗಂಟೆ ಕಾರ್ಯಾಗಾರದಲ್ಲಿ ಐಎಎಸ್, ಐಪಿಎಸ್, ಐಆರ್ಎಸ್, ಕೆಎಎಸ್ ಸಾಧಕ ಅಧಿಕಾರಿಗಳು ಅರ್ಥಪೂರ್ಣ ಚಿಂತನೆ ಮಂಡಿಸಿ, ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬಿದರು. ನಾಗರಿಕ ಸೇವೆ ಪರೀಕ್ಷೆಗೆ ಈಗಿನಿಂದಲೇ ಸನ್ನದ್ಧರಾಗಿ ಎಂಬ ಆತ್ಮವಿಶ್ವಾಸ ಜಾಗೃತಗೊಳಿಸಿತು.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಹಾಗೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪರೀಕ್ಷೆಗೆ ಪೂರ್ವತಯಾರಿ ಹೇಗೆ ಮಾಡಿಕೊಳ್ಳಬೇಕು? ಇಲ್ಲಿ ಸಾಧನೆ ಮಾಡಲು ಇರುವ ಮಾರ್ಗಗಳೇನು? ಯಾವ ಪದವಿ, ಯಾವ ಭಾಷೆ ಗುರಿ ತಲುಪಲು ಪೂರಕವಾಗಬಹುದು? ಅಧ್ಯಯನ ಕ್ರಮ ಯಾವ ರೀತಿ ಇರಬೇಕು ಎಂಬಿತ್ಯಾದಿ ಕುರಿತು ಸಾಧಕ ಅಧಿಕಾರಿಗಳು ಅನೇಕ ಉದಾಹರಣೆಗಳೊಂದಿಗೆ ಸುದೀರ್ಘವಾಗಿ ಪಾಠ ಹೇಳಿ ಗಮನ ಸೆಳೆದರು. ಕಷ್ಟಗಳನ್ನೆಲ್ಲ ದಾಟಿ ತಾವು ಹೇಗೆ ಈ ಪರೀಕ್ಷೆ ಪಾಸಾಗಿದ್ದೇವೆ ಎಂಬ ನಿದರ್ಶನ ನೀಡಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ಕಾರಣ ಮೊದಲೇ ನೋಂದಣಿ ಮಾಡಿಕೊಂಡವರಿಗೆ ಆಸನ ಕಾದಿರಿಸಲಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳು ನೋಂದಣಿಗೆ ಬಯಸಿದ ಕಾರಣ ಅವರಿಗೂ ಇದರಲ್ಲಿ ಪಾಲ್ಗೊಳ್ಳುವಿಕೆಗಾಗಿ ಯುಟ್ಯೂಬ್ನಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಸುದೀರ್ಘ ಅವಧಿಯ ಕಾರ್ಯಾಗಾರದಲ್ಲಿ ಅಧಿಕಾರಿಗಳ ಮಾತಿನಿಂದ ನವಚೈತನ್ಯ ಪಡೆದ ವಿದ್ಯಾರ್ಥಿಗಳು ಹೊಸ ಭರವಸೆ, ಸಂಕಲ್ಪದೊಂದಿಗೆ ವಾಪಸ್ಸಾದರು. ಹೋಗುವಾಗ ಅನೇಕರು ನಾವೂ ಸಿವಿಲ್ ಪರೀಕ್ಷೆಗೆ ರೆಡಿ ಎಂದು ಹೇಳಿ ಕಾರ್ಯಾಗಾರ ಆಯೋಜಿಸಿದ್ದ ಜಿಲ್ಲಾಡಳಿತಕ್ಕೆ ಹ್ಯಾಟ್ಸಾಫ್ ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ರಾಮಚಂದ್ರನ್, ನಾಗರಿಕ ಸೇವೆ ಪರೀಕ್ಷೆಗಳಲ್ಲಿ ಕರ್ನಾಟಕದ ದಕ್ಷಿಣ ಭಾಗಕ್ಕೆ ಹೋಲಿಸಿದರೆ ಇಲ್ಲಿ ಭಾಗವಹಿಸುವಿಕೆ ಹಾಗೂ ಉತ್ತೀರ್ಣರಾಗುವವರ ಸಂಖ್ಯೆ ತೀರ ಕಮ್ಮಿಯಿದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪರೀಕ್ಷೆ ಸಜ್ಜಾಗಿ ಸಾಧನೆ ಮಾಡುವ ಧ್ಯೇಯದಿಂದ ಜಿಲ್ಲಾಡಳಿತ ಈ ಕಾರ್ಯಕ್ಕೆ ಮುಂದಾಗಿದೆ. ಸಾಧನೆ ಮಾಡೇ ಮಾಡುತ್ತೇನೆ ಎಂಬ ಛಲ ಹೊಂದು ಹೆಜ್ಜೆ ಹಾಕಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಅನೇಕ ಸಾಧಕರು ಹೊರಹೊಮ್ಮುವರು ಎಂದು ಆಶಾಭಾವ ವ್ಯಕ್ತಪಡಿಸಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ, ಸಂಸದ ಭಗವಂತ ಖೂಬಾ ಮಾತನಾಡಿದರು. ಎಸ್ಪಿ ಡಿ.ಎಲ್.ನಾಗೇಶ, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್ ಎಸಿ ಗರೀಮಾ ಪನ್ವಾರ್, ಬಸವಕಲ್ಯಾಣ ಎಸಿ ಪಾಟೀಲ್ ಭುವನೇಶ, ವಿಜಯಪುರ ಜಿಲ್ಲೆಯ ಇಂಡಿ ಎಸಿ ರಾಹುಲ್ ಸಿಂಧೆ, ಐಪಿಎಸ್ ಪ್ರೊಬೇಷನರಿ ಅಧಿಕಾರಿ ಸಿದ್ಧಾರ್ಥ ಗೋಯಲ್, ಯಾದಗಿರಿ ಎಸಿ ಅಶ್ವಿಜಾ, ಭಾಲ್ಕಿ ಡಿವೈಎಸ್ಪಿ ಡಾ. ದೇವರಾಜ್, ಯುಪಿಎಸ್ಸಿ ಸಾಧಕರಾದ ನದಿಮೊದ್ದೀನ್, ಅಮರೇಶ್ವರ ಪಾಟೀಲ್, ತಹಸೀಲ್ದಾರರಾದ ಸಾವಿತ್ರಿ ಸಲಗರ್, ನಾಗಯ್ಯ ಹಿರೇಮಠ, ಗಂಗಾದೇವಿ, ಚಂದ್ರಶೇಖರರಾವ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಶಾಹೀನ್ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಜ್ಞಾನಸುಧಾ ಸಂಸ್ಥೆ ನಿರ್ದೇಶಕ ಮುನೇಶ್ವರ ಲಾಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಇದ್ದರು. ಚನ್ನಬಸವ ಹೇಡೆ ನಿರೂಪಣೆ ಮಾಡಿದರು.
ನಾವು ಪಾಸಾಗಿದ್ದೇವೆ, ನೀವೂ ಪಾಸಾಗಿ
ಬೀದರ್ ಜಿಲ್ಲೆಯವರೇ ಆದ ನಾವು ಯುಪಿಎಸ್ಸಿ ಪಾಸಾಗಿದ್ದೇವೆ. ನೀವೂ ಪಾಸಾಗಬಹುದು. ಹೀಗೆ ಹೇಳಿದವರು ಬೀದರ್ ನ ಐಎಎಸ್ ಸಾಧಕ ವಿಜಯಪುರ ಜಿಲ್ಲೆ ಇಂಡಿಯ ಎಸಿ ರಾಹುಲ್ ಸಿಂಧೆ ಹಾಗೂ ಪುಣೆಯಲ್ಲಿ ಐಆರ್ ಎಸ್ ಅಧಿಕಾರಿಯಾಗಿರುವ ಭಾಲ್ಕಿಯ ಅಮರೇಶ್ವರ ಪಾಟೀಲ್. ನಾವು ಎಲ್ಲಿನವರು ಎಂಬುದಕ್ಕಿಂತ ನಾವು ಏನು ಮಾಡಬೇಕಿದೆ ಎಂಬುದು ಮುಖ್ಯ. ಬೀದರ್ ಅಂದರೆ ಹಿಂದುಳಿದ ಜಿಲ್ಲೆ, ಇಲ್ಲಿನವರಿಗೆ ಯುಪಿಎಸ್ಸಿ ಕನಸಿನ ಮಾತು ಎಂದು ಹೇಳುವವರಿಗೆ ನಾವೆಲ್ಲ ಹೇಗೆ ಪಾಸಾಗಿದ್ದೇವೆ ಎಂಬುದು ಪ್ರಶ್ನಿಸಿ. ಇತ್ತೀಚೆಗೆ ಜಿಲ್ಲೆಯ ಹತ್ತಾರು ವಿದ್ಯಾರ್ಥಿಗಳು ಯುಪಿಎಸ್ಸಿ, ಕೆಪಿಎಸ್ಸಿಯಲ್ಲಿ ಸಾಧನೆ ಮಾಡಿದ್ದಾರೆ. ಅವರಂತೆ ನೀವು ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಬಿತ್ತಿದರು. ಪ್ರತಿಭೆ ಎಲ್ಲಿಂದಲೂ ಅರಳುತ್ತವೆ. ಅದಕ್ಕೆ ಸ್ಥಳ, ಜಾತಿ, ಬಡತನ ಎಂಬ ಯಾವುದೇ ರೇಖೆ ಇಲ್ಲ. ಉದಾತ್ತ ಗುರಿ, ಕಠಿಣ ಪರಿಶ್ರಮ, ಸಾಧಿಸುವ ಛಲ ಹೊಂದಿದರೆ ಯಾರು ಬೇಕಾದರೂ ನಮ್ಮಂಥ ಸಾಧನೆಗೆ ಭಾಜನರಾಗಬಹುದು ಎಂದರು.
ಅಂಕಕ್ಕಿಂತ ಆತ್ಮವಿಶ್ವಾಸವೇ ಪ್ರಖರ
ಅಂಕ ಕಮ್ಮಿಯಿದ್ದರೂ ನಾಗರಿಕ ಸೇವೆ ಪರೀಕ್ಷೆಯಲ್ಲಿ ಸಾಧನೆ ಮಾಡಬಹುದು. ಆದರೆ ಆತ್ಮವಿಶ್ವಾಸದ ಕೊರತೆಯಿದ್ದರೆ ಫಲ ಸಿಗದು ಎಂದು ಎಸ್ಪಿ ಡಿ.ಎಲ್.ನಾಗೇಶ ಹೇಳಿದರು. ಆತ್ಮವಿಶ್ವಾಸ ನಮಗಿರುವ ಅತ್ಯಂತ ಪ್ರಖರ ಅಸ್ತ್ರ. ಕಠಿಣ ಪರಿಶ್ರಮದೊಂದಿಗೆ ಆತ್ಮವಿಶ್ವಾಸದ ಅಸ್ತ್ರದ ಮೂಲಕ ನಾವು ಹೆಜ್ಜೆಯಿಟ್ಟರೆ ಗುರಿ ಮುಟ್ಟಬಹುದು ಖಚಿತ. ಕಾಲೇಜು, ಪದವಿಯಲ್ಲಿ ಶೇ.50ರಷ್ಟು ಅಂಕ ಪಡೆದ ಅನೇಕರು ಇಂದು ಐಎಎಸ್, ಐಪಿಎಸ್ ಇದ್ದಾರೆ. ಕೆಲವರು ಮೊದಲ ಯತ್ನದಲ್ಲಿ ಈ ಸಾಧನೆ ಮಾಡಿದರೆ ಮತ್ತೆ ಕೆಲವರು ನಾಲ್ಕೈದು ಸಲದ ಯತ್ನದಲ್ಲಿ ಗುರಿ ಮುಟ್ಟಿದ್ದಾರೆ. ಇದಕ್ಕೆಲ್ಲ ಅವರಲ್ಲಿರುವ ಗುರಿ ಮುಟ್ಟಿಯೇ ತೀರುವೆ ಎಂಬ ಆತ್ಮವಿಶ್ವಾಸವೇ ಮೂಲ ಕಾರಣ ಎಂದು ಅರ್ಥಪೂರ್ಣ ವಿಷಯ ಮಂಡಿಸಿ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು. ಪದವಿ ನಂತರ ನನಗೆ ಕೈತುಂಬ ವೇತನದ ಕೆಲಸ ಸಿಕ್ಕಿತ್ತು. ಆದರೆ, ಯುಪಿಎಸ್ಸಿಯತ್ತ ಚಿತ್ತ ಹರಿಸಿ ಕೆಲಸ ಬಿಟ್ಟು ಬಂದೆ. ನಾಲ್ಕನೇ ಯತ್ನದಲ್ಲಿ ಉತ್ತಮ ರ್ಯಾಂಕ್ನೊಂದಿಗೆ ಐಪಿಎಸ್ ಪಡೆದು ನಿಮ್ಮೆದುರು ಎಸ್ಪಿಯಾಗಿ ನಿಂತಿರುವೆ. ನನ್ನ ಸಾಧನೆಗೆ ನನ್ನ ಆತ್ಮವಿಶ್ವಾಸ ಪ್ರಬಲ ಅಸ್ತ್ರವಾಗಿ ಕೆಲಸ ಮಾಡಿದೆ. ನಿಮ್ಮಲ್ಲೂ ಆತ್ಮವಿಶ್ವಾಸ ಇದ್ದರೆ ಹಿಡಿದ ಗುರಿ ಪಕ್ಕಾ ಮುಟ್ಟುತ್ತಿರಿ ಎಂದು ವಿದ್ಯಾರ್ಥಗಳ ಗಮನ ಸೆಳೆದರು.
ಬಿಎ ಓದಿದರೂ ಐಎಎಸ್ ಸುಲಭ
ಬಿಎ, ಎಂಎ ಮಾಡಿದ್ದೇವೆ ಎನ್ನುವ ಕೀಳರಿಮೆ ಬೇಡ. ಈ ಪದವಿ ಪಡೆದವರು ಸಹ ಯುಪಿಎಸ್ಸಿಯಲ್ಲಿ ಸಾಧನೆ ಮಾಡಿ, ಐಎಎಸ್ ಗಿಟ್ಟಿಸಿಕೊಳ್ಳಬಹುದೆಂಬುದಕ್ಕೆ ನಾನೇ ಉದಾಹರಣೆ ಎಂದು ಬೀದರ್ ಎಸಿ ಗರೀಮಾ ಪನ್ವಾರ್ ಹೇಳಿದರು. ಯುಪಿಎಸ್ಸಿಯಲ್ಲಿ 212ನೇ ರ್ಯಾಂಕ್ ಗಳಿಸಿ ಐಎಎಸ್ (2018ರ ಬ್ಯಾಚ್) ಅಧಿಕಾರಿಯಾಗಿದ್ದೇನೆ. ರಾಜಸ್ಥಾನದ ಡಿಡ್ವಾನಾದ ನಾನು ಬಿಎ, ಎಂಎ ಪಾಲಿಟಿಕಲ್ ಸೈನ್ಸ್ ಮುಗಿಸಿದ ನಂತರ ಮೊದಲ ಯತ್ನದಲ್ಲೇ ಐಎಎಸ್ ಪಡೆದೆ. ಬಿಎ ಓದುವವರಲ್ಲಿ ಸಾಮಾನ್ಯವಾಗಿ ನಮ್ಮಿಂದ ದೊಡ್ಡ ಸಾಧನೆ ಆಗದೆಂಬ ಮನೋಭಾವ ಇರುತ್ತದೆ. ಇದು ತಪ್ಪು. ನಾವು ಗುರಿಯತ್ತಲೇ ಚಿತ್ತ ಹರಿಸಿ ಹೆಜ್ಜೆ ಇಟ್ಟರೆ ಸಾಧನೆ ಪಕ್ಕಾ ಎಂದು ಹೇಳಿ ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬಿದರು. ನಾನು 6ನೇ ಇದ್ದಾಗ ತಂದೆಯವರು ಒಮ್ಮೆ ನೀನು `ಕಲೆಕ್ಟರ್'ಆಗುತ್ತಿ ಎಂದಿದ್ದರು. ನನಗೆ ಕಲೆಕ್ಟರ್ ಎಂದರೇನು ಎಂಬುದರ ಅರಿವು ಸಹ ಇರಲಿಲ್ಲ. ಆದರೆ ಸತತ ತಂದೆಯವರು ಈ ಮಾತು ಹೇಳುತ್ತ ನನ್ನನ್ನು ಕೊನೆಗೂ ಕಲೆಕ್ಟರ್ ಮಾಡಿದರು. ನಮ್ಮ ಮನೆಯಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿದ ಮೊದಲ ಮಹಿಳೆ ನಾನು. ಯುಪಿಎಸ್ಸಿ ಸಾಧನೆಗೆ ಡಿಗ್ರಿ ಯಾವುದು ಎಂಬುದಕ್ಕಿಂತ ಜ್ಞಾನ, ಪರಿಶ್ರಮ, ಆತ್ಮವಿಶ್ವಾಸವೇ ಜಾಸ್ತಿ ಮಹತ್ವ ಪಡೆಯುತ್ತದೆ. ಕೀಳರಿಮೆ ನಮ್ಮ ಸಾಧನೆಗೆ ಅಡ್ಡಿಯಾಗುತ್ತದೆ ಎಂದರು.
ಬಡತನ, ಕಷ್ಟದಲ್ಲೇ ಪ್ರತಿಭೆ ಅರಳುತ್ತವೆ
ಬಡತನ, ಕಷ್ಟ, ಸಮಸ್ಯೆ ಇದ್ದಲ್ಲೇ ಪ್ರತಿಭೆಗಳು ಅರಳುತ್ತವೆ. ಸಮಸ್ಯೆಗಳು ನಮ್ಮ ಸಾಧನೆಗಿರುವ ಮೆಟ್ಟಿಲುಗಳು ಎಂದು ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರೂ ಆದ ಶೈಕ್ಷಣಿಕ ಚಿಂತಕ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಹೇಳಿದರು. ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದ ಅವರು, ವಿಶ್ವದ ನೂರಾರು ಶ್ರೇಷ್ಠ ಸಾಧಕರ ಜೀವನ ಚರಿತ್ರೆ ನೋಡಿದರೆ ಅವರು ಕಷ್ಟದ ಕೋಟಲೆಗಳಿಂದಲೇ ಮುಂದೆ ಬಂದಿದ್ದು ಸ್ಪಷ್ಟವಾಗುತ್ತದೆ. ನಿಮ್ಮೊಳಗೆ ಅಗಾಧ ಶಕ್ತಿ ಅಡಗಿದೆ. ಅದನ್ನು ಅರಿತು ನಡೆದಾಗ ಅದ್ಭುತ ಸಾಧನೆ ನಮಗಾಗಿ ಕಾಯುತ್ತಿರುತ್ತದೆ. ನಿನ್ನ ಭವಿಷ್ಯದ ಶಿಲ್ಪಿ ನೀನೇ ಎಂಬ ವಿವೇಕಾನಂದರ ಚಿಂತನೆ ವಿದ್ಯಾರ್ಥಿಗಳಿಗೆ ದಿವ್ಯ ಶಕ್ತಿ ಎಂದರು. ಜ್ಞಾನದ ಬಲದಿಂದ ಇಡೀ ವಿಶ್ವವೇ ನನ್ನತ್ತ ನೋಡಿ ಅಚ್ಚರಿಪಡುವಂತೆ ಮಾಡಬೇಕು. ಮಹಾ ಸಾಧನೆ ಕಂಡು ಹುಬ್ಬೇರಿಸಬೇಕು. ಯಾರಿವನು? ಎಂಥ ವ್ಯಕ್ತಿತ್ವ? ಎಂದು ಉದ್ಗರಿಸಬೇಕು. ವಿವೇಕಾನಂದರ ಚಿಕ್ಯಾಗೋ ಭಾಷಣ ಅದ್ಹೇಗೆ ವಿಶ್ವವ್ಯಾಪಿ ಮೆರೆಯಿತು ಎಂದ ಅವರು, ಮಹತ್ತರ ಸಾಧನೆ ಹುಚ್ಚು ಹಿಡಿಸಿಕೊಂಡು, ಅದನ್ನು ಮುಟ್ಟುವವರೆಗೆ ವಿರಮಿಸಬಾರದು. ಸಾಧನೆಯ ಬೆನ್ನು ಬಿದ್ದವರಿಗೆ ಗುರಿಯನ್ನು ಬಿಟ್ಟರೆ ಬೇರೇನೂ ಕಾಣಬಾರದು. ಸುತ್ತಲಿನ ಬೇರ್ಯಾವುದೇ ವಿಷಯ ನನಗೆ ಸಂಬಂಧಿಸಿದ್ದಲ್ಲ ಎಂದು ಅಧ್ಯಯನದಲ್ಲಿ ತೊಡಗಬೇಕು. ಅಂಥವರು ಮಾತ್ರ ಬೇಕಾದಂತಹ ಸಾಧನೆ ಮಾಡಬಹುದು ಎಂದು ಪ್ರತಿಪಾದಿಸಿದರು.
ನಾಗರಿಕ ಸೇವೆ ಪರೀಕ್ಷೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಿಂದ ಕೆಲವರು ಪಾಸಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕೆಂಬ ಆಶಯ ನಮ್ಮದು. ಇಂದಿನ ಕಾರ್ಯಾಗಾರ ಆರಂಭವಾಗಿದೆ. ಬರುವ ದಿನಗಳಲ್ಲಿ ಇದಕ್ಕೆ ಪೂರಕ ಇನ್ನಷ್ಟು ಕಾರ್ಯಚಟುವಟಿಕೆ ನಡೆಸಲಾಗುವುದು. ಇಲ್ಲಿನ ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆ ಇದೆ. ಅವರಿಗೆ ಕೊರತೆಯಿರುವ ಪ್ರೋತ್ಸಾಹ, ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಎಲ್ಲರ ಸಹಯೋಗದಿಂದ ಜಿಲ್ಲಾಡಳಿತ ಮಾಡಲಿದೆ. ರಾಮಚಂದ್ರನ್, ಜಿಲ್ಲಾಧಿಕಾರಿ
ಹಳ್ಳಿಯಲ್ಲಿ ಜನಿಸಿದ ನಾನು ಕೃಷಿ ಚಟುವಟಿಕೆಗಳನ್ನು ಮಾಡುತ್ತಲೇ ವ್ಯಾಸಂಗ ಮಾಡಿದೆ. ಕಷ್ಟಪಟ್ಟು ಓದಿ, ಪ್ರತಿ ನಿಮಿಷದ ಸದ್ಬಳಕೆ ಮಾಡಿಕೊಂಡಿದ್ದರಿಂದ ಯುಪಿಎಸ್ಸಿ ಉತ್ತಮ ರ್ಯಾಂಕ್ ಗಳಿಸಿದೆ. ನಮ್ಮ ಮೇಲೆ ನಮಗೆ ಮೊದಲು ಭರವಸೆಯಿದ್ದರೆ ಗುರಿ ಸರಳವಾಗುತ್ತದೆ. ನನ್ನಿಂದ ಏನೂ ಆಗಲ್ಲ ಎಂದರೆ ನಮ್ಮಲ್ಲಿ ಪ್ರತಿಭೆ ಇದ್ದರೂ ಕಮರಿಹೋಗುತ್ತದೆ. | ಗ್ಯಾನೇಂದ್ರಕುಮಾರ ಗಂಗವಾರ್, ಜಿಪಂ ಸಿಇಒ
ಓದುವ ಹಂಬಲ, ಸಾಧಿಸುವ ಛಲವಿದ್ದರೆ ಬಡತನ ಯಾವುದಕ್ಕೂ ಅಡ್ಡಿ ಬರದು. ನಾವು ಎಷ್ಟು ಓದಿದ್ದೇವೆ ಎಂಬುದಕ್ಕಿಂತ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂಬುದು ಮುಖ್ಯ. ಕಠಿಣ ಶ್ರಮಪಟ್ಟರೆ ನಾಗರಿಕ ಸೇವೆ ಪರೀಕ್ಷೆ ಸುಲಭ ಪಾಸಾಗಬಹುದು. ಏನು ಓದಬೇಕು? ಯಾವ ರೀತಿ ಓದಬೇಕು ಎಂಬ ಸ್ಪಷ್ಟತೆ ಇರಬೇಕು. ಗ್ರೂಪ್ ಸ್ಟಡಿಗೆ ಕೊಟ್ಟ ಮಹತ್ವ ನನ್ನ ಕೆಎಎಸ್ ಸಾಧನೆಗೆ ಕಾರಣವಾಯಿತು. | ರುದ್ರೇಶ ಗಾಳಿ, ಅಪರ ಜಿಲ್ಲಾಧಿಕಾರಿ
ಕಲಿಕೆ ನಿರಂತರ ಪ್ರಕ್ರಿಯೆ ಆಗಬೇಕು. ಹೊಸತು ಕಲಿಯುವ ಮನೋಭಾವವಿದ್ದರೆ ಅದ್ಭುತ, ಅಗಾಧ ಅನುಭವ ಕೊಡುತ್ತದೆ. ಬದುಕಿನಲ್ಲಿ ಉಲ್ಲಾಸ ಕೊಡುತ್ತದೆ. ಪದವಿ ಯಾವುದು ಎಂಬುದಕ್ಕಿಂತಲೂ ಮುಂದೇನು ಮಾಡಬೇಕು? ಇಂದೇನು ಕಲಿಯಬೇಕೆಂಬುದು ಮುಖ್ಯ. ಗುರಿ ಮುಟ್ಟುವವರೆಗೂ ನಾವು ವಿದ್ಯಾರ್ಥಿ (ಅಧ್ಯಯನಶೀಲ) ಆಗಿರಬೇಕು. ಅಶ್ವಿಜಾ, ಎಸಿ ಯಾದಗಿರಿ