

ಹನೂರು: ತಾಲೂಕಿನ ಕಣ್ಣೂರು ಗ್ರಾಮದ ವಾಸಿ, ಡಿವೈಎಸ್ಪಿ ನಾಗರಾಜು 2023ನೇ ಸಾಲಿನ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಕಣ್ಣೂರು ಗ್ರಾಮದ ದಿ.ಸಿದ್ದೇಗೌಡ ಮತ್ತು ಪುಟ್ಟ ವೀರಮ್ಮ ಅವರ ಕಿರಿಯ ಪುತ್ರ ನಾಗರಾಜ್ ಪ್ರಾಥಮಿಕ ಶಿಕ್ಷಣವನ್ನು ಗ್ರಾಮದಲ್ಲಿ, ಪ್ರೌಢ ಶಿಕ್ಷಣವನ್ನು ಕೊಳ್ಳೇಗಾಲದ ಎಂಸಿಕೆಸಿ ಪ್ರೌಢಶಾಲೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
2001ನೇ ಸಾಲಿನಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಇಲಾಖೆಗೆ ನೇಮಕಗೊಂಡ ಇವರು, ಪಾವಗಡ, ಬೆಂಗಳೂರು ಹೆಬ್ಬಗೋಡಿ ಪೊಲೀಸ್ ಠಾಣೆ, ತುಮಕೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2008ರಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಮುಂಬಡ್ತಿ ಪಡೆದು ಬೆಂಗಳೂರು ನಗರದ ಮಹಾಲಕ್ಷ್ಮೀ ಪೊಲೀಸ್ ಠಾಣೆ, ಮಾಗಡಿ ರಸ್ತೆ ಸಂಚಾರಿ ಪೊಲೀಸ್‌ಠಾಣೆ, ಬೆಂಗಳೂರು ಗ್ರಾಮಾಂತರ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ , ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಬಿಡಿಎ ಜಾಗೃತಿ ದಳ, ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ 2021ರ ಸಾಲಿನಲ್ಲಿ ಡಿವೈಎಸ್ಪಿಯಾಗಿ ಮುಂಬಡ್ತಿ ಹೊಂದಿದರು. ಪ್ರಸ್ತುತ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು 2015ನೇ ಸಾಲಿನಲ್ಲಿ ಮಾಧ್ಯಮ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಇದೀಗ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ಪಡೆದು ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.