

ಮೈಸೂರು: ಎಚ್.ಡಿ.ಕೋಟಿ ತಾಲೂಕಿನ ಕಬಿನಿ ಹಿನ್ನೀರಿನಲ್ಲಿರುವ ನಾಗರಹೊಳೆ ಮತ್ತು ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ರೆಸಾರ್ಟ್ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಅಶೋಕ ವೃತ್ತದಿಂದ ಅರಣ್ಯಭವನದವರೆಗೆ ಜಾಥಾ ನಡೆಸಿದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರದ ಪರಿಸರ ಮತ್ತು ಜೀವಶಾಸ್ತ್ರ ಸಚಿವಾಲಯದಿಂದ 2011ರಲ್ಲಿ ರಾಷ್ಟ್ರೀಯ ಉದ್ಯಾನವನಗಳ ಮತ್ತು ವನ್ಯ ಜೀವಿಧಾಮಗಳ ಗಡಿಯಿಂದ 10 ಕಿ.ಮೀ. ಹಾಗೂ ಬಂಡಿಪುರದ 5 ಕಿ.ಮೀ.ವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿದೆ. ಕಾವೇರಿ ನೀರಾವರಿ ನಿಗಮವು ಈ ಅರಣ್ಯ ಗಡಿಯಿಂದ 100 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಿದೆ.
ಈ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಕಟ್ಟಡ, ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂಬ ನಿಯಮ ರೂಪಿಸಲಾಗಿದೆ. ಹೀಗಿದ್ದರೂ ಈ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್‌ಗಳು ನಿರ್ಮಾಣವಾಗುತ್ತಿವೆ ಎಂದು ದೂರಿದರು.
ಕೂಡಲೇ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕು. ಅರಣ್ಯ ಸಂಪತ್ತು, ವನ್ಯಜೀವಿಗಳನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಫೌಂಡೇಷನ್‌ನ ಅಧ್ಯಕ್ಷ ಆರ್ಯನ್ ಗಂಧದಗುಡಿ, ಉಪಾಧ್ಯಕ್ಷ ಮನೋಹರ್ ಗೌಡ, ಪದಾಧಿಕಾರಿಗಳಾದ ಮೇಘನ್ ಗೌಡ, ಮಾದೇವ ಶೆಟ್ಟಿ, ಗೌತಮ್, ಯಂಗ್ ಆರ್ಮಿಯ ಪೃಥ್ವಿರಾಜ್, ಪರಿಸರ ಪ್ರೇಮಿಗಳಾದ ಭಾನುಮೋಹನ್, ಕಬಿನಿ ಶಿವಲಿಂಗು, ವಿಶ್ವಕುಮಾರ್, ಯಶೋಧ, ವಿನೋದ್ ವಿಲಿಯಂ ಇನ್ನಿತರರಿದ್ದರು.