

ಬೀದರ್: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಕುರಿತ ಮಾಹಿತಿ ಜನಸಾಮಾನ್ಯರಿಗೆ ತಲುಪಿಸಲು ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಸಿದ್ಧಪಡಿಸಿದ ಮಾಹಿತಿ ಪುಸ್ತಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ರಾಜ್ಯ ಸರ್ಕಾರ ವಿವಿಧ ಇಲಾಖೆ, ನಿಗಮಗಳ ಮೂಲಕ ಜಾರಿಗೊಳಿಸಿರುವ ಜನಪರ ಮತ್ತು ಅಭಿವೃದ್ಧಿ ಯೋಜನೆ ಮಾಹಿತಿಯನ್ನು ನವಭಾರತಕ್ಕಾಗಿ ನವ ಯೋಜನೆಗಳು ಕೃತಿ ಒಳಗೊಂಡಿದೆ. ಪುಸ್ತಕ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ, ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಇದು ನೆರವಾಗಲಿದೆ ಎಂದು ನಾಗಮಾರಪಳ್ಳಿ ಕಾರ್ಯ ಕೊಂಡಾಡಿದರು.
ಸಮಾಜದ ಕಟ್ಟಕಡೆ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಲಾಭ ತಲುಪಬೇಕು ಎಂಬುದು ಪ್ರಧಾನಿ, ಸಿಎಂ ಆಶಯವಾಗಿದೆ. ಎಲ್ಲ ಯೋಜನೆಗಳ ಉದ್ದೇಶ ಈಡೇರುವಂತಾಗಲು ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ. ಕೇಂದ್ರದ 170ಕ್ಕೂ ಅಕ ಮತ್ತು ರಾಜ್ಯ ಸರ್ಕಾರದ 40ಕ್ಕೂ ಹೆಚ್ಚು ಯೋಜನೆಗಳ ಮಾಹಿತಿ ಸಂಗ್ರಹಿಸಿ ಜನರಿಗೆ ಪುಸ್ತಕದ ಮೂಲಕ ನೀಡಲಾಗಿದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.