ನಾಗಮಂಗಲಕ್ಕೆ ಎಚ್‌ಡಿಕೆ ಕೊಡುಗೆ ಶೂನ್ಯ

27 NMG 01 (2)
Published on


ನಾಗಮಂಗಲ: ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾಗಲೂ ನಾಗಮಂಗಲಕ್ಕೆ ಏನೂ ಕೊಡುಗೆ ನೀಡಿಲ್ಲ. ತಾಲೂಕಿಗೆ ಎಚ್‌ಡಿಕೆ ಕೊಡುಗೆ ಶೂನ್ಯವಾಗಿದ್ದು, ತಾಲೂಕಿನ ಜನತೆಗೆ ಬದುಕು ಕಟ್ಟಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕದಬಹಳ್ಳಿ ಕಾವೇಟಿ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಎಲ್‌ಆರ್‌ಎಸ್ ಸ್ವಾಭಿಮಾನ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಗಮಂಗಲ ತಾಲೂಕಿನಲ್ಲಿ ಸೋಮವಾರ ನಡೆದ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ನನಗೆ ಮುಖಂಡರು ಬುದ್ಧೀ ಹೇಳುತ್ತಿದ್ದಾರಂತೆ ಎಂದು ನನ್ನ ಬಗ್ಗೆ ಲಘುವಾಗಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ. ನನಗೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಅಪಾರವಾದ ಗೌರವವಿದೆ. ಆದರೆ, ನನ್ನ ಬಗ್ಗೆ ಲಘುವಾಗಿ ಮಾತನಾಡಿದ ನಂತರ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ ನಂತರವೂ ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.

ನನ್ನಿಂದ ಕಳೆದ ಬಾರಿ ಲೋಕಸಭೆ ಉಪಚುನಾವಣೆಯಲ್ಲಿ ಕೇವಲ 5 ತಿಂಗಳ ಅಧಿಕಾರಕ್ಕಾಗಿ 32 ಕೋಟಿ ರೂ.ಗಳನ್ನು ಎಚ್.ಡಿ.ಕುಮಾರಸ್ವಾಮಿ ವ್ಯಯ ಮಾಡಿಸಿ ಸಾಲಗಾರರನ್ನಾಗಿಸಿದ್ದಾರೆ. ಆದರೆ, ನಂತರ ನಡೆದ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ಕೊಟ್ಟರು. ನೀವು ನನಗೆ ಬುದ್ಧಿ ಹೇಳಿಸುವ ಬದಲು 5 ತಿಂಗಳಿಗೆ ಸಂಸದ ಸ್ಥಾನದಿಂದ ಕೆಳಗಿಳಿಸಿ ಮಗನಿಗೆ ಟಿಕೆಟ್ ಕೊಟ್ಟಿರಲ್ಲ ನಿಮಗೆ ಮೊದಲು ಬುದ್ಧಿ ಹೇಳಿಸಬೇಕಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಸ್ವಾಭಿಮಾನಿ ಜನತೆಯೇ ಬುದ್ಧಿ ಹೇಳಲಿದ್ದಾರೆ. ತಾಲೂಕಿನ ಮತದಾರರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ನಿಮ್ಮ ಯಾವ ಪಂಚರತ್ನ ಯಾತ್ರೆ ಫಲ ನೀಡುವುದಿಲ್ಲ. ತಾಲೂಕಿನಲ್ಲಿ ನನ್ನದೇ ಆದಂತಹ 40 ಸಾವಿರ ಮತಗಳಿದ್ದು ಅವುಗಳನ್ನು ನಿಮ್ಮ ಯಾವ ಯಾತ್ರೆಯಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ಕಣ್ಣೀರಿಟ್ಟು ಬೆಂಬಲ ಕೋರಿದ ಎಲ್‌ಆರ್‌ಎಸ್:
ಅಂಬರೀಶ್ ಪತ್ನಿ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೆರಗೊಡ್ಡಿ ಭಿಕ್ಷೆ ಬೇಡಿದ ರೀತಿ ನಾನು ಈ ಬಾರಿ ತಾಲೂಕಿನ ಸ್ವಾಭಿಮಾನಿ ಮತದಾರರ ಬಳಿ ಮತಭಿಕ್ಷೆ ಬೇಡುತ್ತೇನೆ. ಸುಮಲತಾ ಅವರಿಗೆ ಅಂದು ಯಾವ ಕುಮಾರಸ್ವಾಮಿಯನ್ನು ಲೆಕ್ಕಿಸದೆ ಮತದಾರರು ಗೆಲ್ಲಿಸಿದ್ದಾರೆ. ಅದೇ ರೀತಿ ಈ ಬಾರಿ ನಾಗಮಂಗಲದಲ್ಲಿ ಆಗಲಿದೆ. ದಯಮಾಡಿ ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮತದಾರರು ಕೈಹಿಡಿಯಬೇಕೆಂದು ಟವೆಲ್ ಒಡ್ಡಿ ಮತಭಿಕ್ಷೆ ಬೇಡುತ್ತಿದ್ದೇನೆ ಎಂದು ಕಣ್ಣೀರಿಟ್ಟು ಮನವಿ ಮಾಡಿದರು.

ಈಗಿರುವ ಶಾಸಕ 10 ಜನ ಗುತ್ತಿಗೆದಾರರನ್ನು ಪಾಲುದಾರರನ್ನಾಗಿಸಿಕೊಂಡು ದೊಡ್ಡ ದೊಡ್ಡ ಕಂಪನಿ ಮಾಡಿಕೊಂಡು ಕಮಿಷನ್ ಮೂಲಕ ಹಣ ಹೊಡೆಯುತ್ತಿದ್ದಾರೆ. ಚಲುವರಾಯಸ್ವಾಮಿ ಇದೇ ರೀತಿಯಲ್ಲಿ ಗುತ್ತಿಗೆದಾರರ ದಂಡು ಕಟ್ಟಿಕೊಂಡು ಚುನಾವಣೆ ಮಾಡಿದ್ದರಿಂದ ಈಗ ಏನಾಗಿದೆಯೋ ಅದೇ ಈಗಿನ ಶಾಸಕರಿಗೂ ಆಗಲಿದೆ. ಕಾವೇಟಿ ರಂಗನಾಥಸ್ವಾಮಿ ಆಣೆ ಮಾಡಿ ಹೇಳ್ತಿನಿ ಸುರೇಶ್‌ಗೌಡ 2023ಕ್ಕೆ ಗೆಲ್ಲಲ್ಲ. ನಾನು 2023ಕ್ಕೆ ಅಭ್ಯರ್ಥಿಯಾಗುತ್ತಿದ್ದು ಯಾವುದೇ ಬದಲಾವಣೆಯಿಲ್ಲ ಎಂದರು.

ಮುಸ್ಲಿಂ ಮುಖಂಡರ ಸೇರ್ಪಡೆ:
ಬೆಳ್ಳೂರಿನ ಮುಸ್ಲಿಂ ಮುಖಂಡ ಜುಬೇರ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತ್ಯಜಿಸಿ ಎಲ್.ಆರ್.ಶಿವರಾಮೇಗೌಡ ಬಣಕ್ಕೆ ಸೇರ್ಪಡೆಯಾದರು.
ಎಲ್.ಆರ್.ಶಿವರಾಮೇಗೌಡ ಪುತ್ರ ಎಲ್.ಎಸ್.ಚೇತನ್‌ಗೌಡ, ಮುಖಂಡ ವಕೀಲ ಟಿ.ಕೆ.ರಾಮೇಗೌಡ, ಮುಖಂಡರಾದ ಶೇಖ್ ಅಹಮದ್, ಮಂಜೇಗೌಡ, ಪಾಳ್ಯರಘು ಮಾತನಾಡಿದರು. ವೇದಿಕೆಯಲ್ಲಿ ತಾಪಂ ಮಾಜಿ ಸದಸ್ಯ ಹೇಮರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಕುಮಾರ್, ಮುಖಂಡರಾದ ಬಿ.ವಿ. ಸತ್ಯನ್, ಮಹದೇವಣ್ಣ, ಚೇತನ್, ಮನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net