

ಹಾಸನ: ನಾಗಮಂಗಲದಲ್ಲಿ ಗಣಪತಿ ಉತ್ಸವ ಸಂದರ್ಭದಲ್ಲಿ ಅಂಗಡಿಗಳಿಗೆ ಬೆಂಕಿ ಹಚ್ಚಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿರುವಂತಹ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಅವರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿ ಘಟನೆಯನ್ನು ಹತೋಟಿಗೆ ತರಲು ಯತ್ನಿಸಿದ್ದಾರೆ. ಅಲ್ಲದೆ ಪೊಲೀಸರು ಗ್ರಾಮದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ ಆ ಘಟನೆ ನಡೆಯಬಾರದು ನಡೆದಿದೆ. ಆದರೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಸಂವಿಧಾನದ ಉಳಿವಿಗಾಗಿ ಸೆ.15ರಂದು ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲಿ ಒಟ್ಟು 114 ಕಿಲೋಮೀಟರ್‌ನಲ್ಲಿ ಮಾನವ ಸರಪಳಿ ನಿರ್ಮಿಸಲಾಗುವುದು. ಮೈಸೂರಿನಲ್ಲಿ ಈಗಾಗಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನಂತರ ಕೊಡಗಿನಿಂದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಮಾನವ ಸರಪಳಿ ಮುಂದುವರಿಯಲಿದೆ. ಅಲ್ಲಿಂದ ಹಾಸನ ಮತ್ತು ಬೇಲೂರು ಮಾರ್ಗವಾಗಿ ಮುಂದುವರಿದು ಆನಂತರ ಚಿಕ್ಕಮಂಗಳೂರಿಗೆ ತೆರಳಲಿದೆ. ಈಗಾಗಲೇ ಅಧಿಕಾರಿಗಳು ಸಭೆಗಳನ್ನು ನೆಲೆಸಿ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು ಶಾಲಾ-ಕಾಲೇಜುಗಳ ಮಕ್ಕಳು ಮಾನವ ಸರಪಳಿ ನಿರ್ಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕು ಎಂದು ಮನವಿ ಮಾಡಿದರು.
ರಾಹುಲ್ ಗಾಂಧಿಯವರು ಮೀಸಲಾತಿ ರದ್ಧತಿ ಬಗ್ಗೆ ನೀಡಿರುವ ಹೇಳಿಕೆಯನ್ನು ವಿರೋಧ ಪಕ್ಷದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ ಅಸಮಾನತೆ ತೊಲಗುವವರೆಗೂ ಮೀಸಲಾತಿಯನ್ನು ರದ್ದುಪಡಿಸಲ್ಲ ಎಂದು ಹೇಳಿದ್ದು ಅವರ ಹೇಳಿಕೆಗೆ ನನ್ನ ಸಹಮತವಿದೆ. ಅದೇ ರೀತಿ ಹಿಂದೆ ಆರ್‌ಎಸ್‌ಎಸ್ ನವರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇತ್ತೀಚೆಗೆ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಮುಡ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಣ್ಣ ಲೋಪವೂ ಆಗಿಲ್ಲ. ಆದರೂ ಕೂಡ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿವೆ. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೂಡ ತಮ್ಮ ಪತ್ನಿಗೆ ಜಮೀನಿಲ್ಲ ಎಂದು ಪಡುವಲಹಿಪ್ಪೆಯಲ್ಲಿ 4.28 ಎಕರೆ ಜಾಗ ಮಂಜೂರು ಮಾಡಲು ಪತ್ರ ಬರೆದಿರಲಿಲ್ಲವೆ? ಅದೇ ರೀತಿ ಅನೇಕರು ಜಾಗಕ್ಕಾಗಿ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ವಿರೋಧ ಪಕ್ಷದವರ ಬೊಜ್ಜು ಕರಗಲಿ
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದವರು ಬಳ್ಳಾರಿಗೆ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದರಿಂದ ಅವರು ಬೆಂಗಳೂರಿನಲ್ಲಿ ಕುಳಿತುಕೊಂಡು ಹೇಳಿಕೆ ನೀಡುವುದು ತಪ್ಪುತ್ತದೆ ಮತ್ತು ಅವರ ಬೊಜ್ಜು ಕೂಡ ಕರಗುತ್ತದೆ ಪಾದಯಾತ್ರೆ ಮಾಡಲಿ ಎಂದು ಸಚಿವರು ಲೇವಡಿ ಮಾಡಿದರು.
ಇದೇ ಮೊದಲ ಬಾರಿಗೆ ಒಂದು ಪ್ರಕರಣದಲ್ಲಿ ಮೂರು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತೇವೆ. ರಾಜ್ಯ ಸರ್ಕಾರ ಎಸ್‌ಐಟಿ ನೇಮಕ ಮಾಡಿ ತನಿಖೆ ನಡೆಸುತ್ತಿತ್ತು. ಇ.ಡಿ. ಮತ್ತು ಸಿಬಿಐನಿಂದಲೂ ಕೂಡ ತನಿಖೆ ನಡೆಯುತ್ತಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರು ಜೈಲಿನಲ್ಲಿದ್ದು ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮವಾಗಲಿದೆ ಎಂದರು.
ರೇವಣ್ಣ ಸಾಕ್ಷಿ ಸಮೇತ ಹೇಳಲಿ:
ಜಿಲ್ಲೆಯಲ್ಲಿ ಅತಿವೃಷ್ಟಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಕರಣದಲ್ಲಿ ದಾಖಲೆ ಸಮೇತ ಅನುದಾನ ಬಿಡುಗಡೆಯಾಗಿಲ್ಲ ಎಂಬುದನ್ನು ತಿಳಿಸಲಿ ಎಂದು ರೇವಣ್ಣ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಕೆ.ಎನ್. ರಾಜಣ್ಣ ಟಾಂಗ್ ನೀಡಿದರು.
ಈ ಬಾರಿ ಮಳೆಯಿಂದ ಸಾಕಷ್ಟು ಅನಾಹುತ ಸೃಷ್ಟಿಯಾಗಿದ್ದು, ಈಗಾಗಲೇ ಪರಿಹಾರದ ಹಣವನ್ನು ವಿತರಿಸಲಾಗಿದೆ, ಜಿಲ್ಲಾಧಿಕಾರಿಗಳ ಖಾತೆಯ ಮೂಲಕ ಫಲಾನುಭವಿಗಳಿಗೆ ನೇರವಾಗಿ ಪರಿಹಾರದ ಹಣ ವರ್ಗಾವಣೆಯಾಗುತ್ತಿದೆ. ರೇವಣ್ಣ ಅವರು ನಿರ್ದಿಷ್ಟ ಪ್ರಕರಣ ಮತ್ತು ನಿರ್ದಿಷ್ಟ ಪರಿಹಾರದ ಬಗ್ಗೆ ತಿಳಿಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ ಇದ್ದರು.