ನಾಗನಾಥೇಶ್ವರ ರಥೋತ್ಸವ 5ರಂದು

04 ಸಿರಿಗೇರಿ 03 ಫೋಟೋ
Published on

ಸಿರಿಗೇರಿ: ಗ್ರಾಮದ ಆರಾಧ್ಯ ದೈವ ಶ್ರೀ ನಾಗನಾಥೇಶ್ವರ ದೇವರ ರಥೋತ್ಸವ ಏ.5ರಂದು ಜರುಗಲಿದೆ.

ಯುಗಾದಿ ದಿನ ತೇರುಗಡ್ಡೆ ಎಳೆಯುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಆ ಬಳಿಕ ಅರ್ಚಕರು ಪಂಚಾಗ ಪಠಣ ಓದಿದ್ದರು. ಶ್ರೀ ನಾಗನಾಥೇಶ್ವರ ಮತ್ತು ಪಾರ್ವತಮ್ಮ ಕಲ್ಯಾಣೋತ್ಸವ, ಹೋಮ-ಹವನ, ಬಲಿ ಹಾಕುವುದು, ಏಳು ದಿನ ಧಾರ್ಮಿಕ ಕೈಂಕರ್ಯಗಳು ನಡೆದಿವೆ. ಗ್ರಾಮದಲ್ಲಿ ಇದೀಗ ರಥೋತ್ಸವ ಸಂಭ್ರಮ ಮನೆ ಮಾಡಿದ್ದು, ಶ್ರೀ ನಾಗನಾಥೇಶ್ವರ ಯುವಕ ಮಂಡಳಿ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಿದೆ. ದೇವಸ್ಥಾನದ ಅಲಂಕಾರ ಭಕ್ತರ ಕಣ್ಮನ ಸೆಳೆಯುತ್ತಿದೆ.

ಗ್ರಾಮಾಡಳಿತ ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ ಮಾಡುವುದರೊಂದಿಗೆ ಗ್ರಾಮವನ್ನು ಸಿಂಗರಿಸಿದೆ. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ದೇವಸ್ಥಾನ ಕಲ್ಯಾಣ ಚಾಲುಕ್ಯರ ಕಾಲದ್ದಾಗಿದ್ದು, ಕಾಲಕ್ಕನುಗುಣವಾಗಿ ದೇವಸ್ಥಾನದ ಜೀರ್ಣೋದ್ಧಾರ ಆಗಿದೆ.

ಜಗದ್ಗುರು ಕೊಟ್ಟೂರು ಮುಪ್ಪಿನ ಬಸವಲಿಂಗ ಸ್ವಾಮಿಗಳು ಹಾಗೂ ಹರಗುರು ಚರಮೂರ್ತಿಗಳು ಶನಿವಾರ ಸಂಜೆ ರಥೋತ್ಸವಕ್ಕೆ ಚಾಲನೆ ನೀಡುವರು. ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಮಾಡಿ ಮಡಿತೇರು ಎಳೆದು ಮೂಲಸ್ಥಾನಕ್ಕೆ ತಂದು ಹೋಮ ಮಾಡಲಾಗುತ್ತದೆ. ನಂತರ ಎದುರು ಬಸವಣ್ಣಗೆ ಬಲಿ ಹಾಕಿ, ದೇವರಿಗೆ ಮಹಾರುದ್ರಾಭಿಷೇಕ ನಡೆಸಲಾಗುತ್ತದೆ. ಗ್ರಾಮದ ಆಧಿದೇವತೆ ಸಿರಿಗೇರಮ್ಮ ದೇವಿಗೆ ಉಡಿ ಅಕ್ಕಿ, ಹಣ್ಣು ಕಾಯಿ ಅರ್ಪಿಸಿ ಸಂಜೆ ಉತ್ಸವ ಮೂರ್ತಿ ಹಾಗೂ ದಂಡಾ ದೀಪದೊಂದಿಗೆ ರಥಕ್ಕೆ ಬಲಿ ಹಾಕಿದ ಮೇಲೆ ರಥೋತ್ಸವ ಜರುಗಲಿದೆ. ಏ.7ರಂದು ಬೆಳಗ್ಗೆ ಓಕಳಿಯಾಡಿ ಗಂಗೆ ಸ್ನಾನ ಮಾಡಿಸಿ ಕಂಕಣ ಬಿಚ್ಚಿ ಉತ್ಸವ ಮೂರ್ತಿಯನ್ನು ಮೂಲ ಸ್ಥಾನಕ್ಕೆ ತರಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net