

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ನಾಗದೋಷ ನಿವಾರಕ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಜಿಲ್ಲೆಯಲ್ಲಿಯೇ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ವ್ಯಾಪ್ತಿಯ ಕ್ಷೇತ್ರ ಭಕ್ತರಿಗೆ ಜನಪ್ರಿಯವಾಗಿದೆ. ನಾಗರಕಟ್ಟೆ ಹಲವು ವಿಶೇಷತೆಗಳಲ್ಲೊಂದಾಗಿದ್ದು, ನೆರೆ ಜಿಲ್ಲೆ ಸೇರಿ ಹೊರರಾಜ್ಯದ ಸಾವಿರಾರು ಭಕ್ತರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ನಾಗದೋಷ ನಿವಾರಣೆಗೆ ಪ್ರಾರ್ಥಿಸುತ್ತಾರೆ. ಘಾಟಿ ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿದೆ.
ಕ್ಷೇತ್ರದಲ್ಲಿ ಪ್ರತಿವರ್ಷ ಜನವರಿಯಲ್ಲಿ ನಡೆಯುವ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಅಂಕುರಾರ್ಪಣೆ ಸೇವಾ ಕಾರ್ಯಕ್ರಮ ಗಮನ ಸೆಳೆಯುತ್ತದೆ. ದೊಡ್ಡಬಳ್ಳಾಪುರದ ದೇವಾಂಗ ಮಂಡಳಿ ಹಾಗೂ ದೇವಾಲಯ ಸಮಿತಿಯಿಂದ ವಿಶೇಷವಾಗಿ ಸಿದ್ಧಪಡಿಸಿದ ನಾಗದೇವತೆ ರೂಪದ ಸುಬ್ರಹ್ಮಣ್ಯ ಹಾಗೂ ಆಯುಧ ವಾಹನ ಚಿತ್ರಪಟವಿರುವ ಧ್ವಜಕ್ಕೆ ಪೂಜೆ ಸಲ್ಲಿಸಿ ಧ್ವಜ ಸ್ತಂಭದ ಮೇಲೆ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನೆರವೇರಿಸುವುದು ಇಲ್ಲಿನ ವಾಡಿಕೆ.
ಬ್ರಹ್ಮ ರಥೋತ್ಸವ ಪ್ರಸಿದ್ಧಿ: ಪುಷ್ಯ ಶುದ್ಧ ಷಷ್ಠಿಯಂದು ಪ್ರತೀ ವರ್ಷ ನಡೆಯುವ ಬ್ರಹ್ಮರಥೋತ್ಸವ ಅದ್ದೂರಿಯಿಂದಲೇ ಗಮನ ಸೆಳೆಯುತ್ತದೆ. ರಥೋತ್ಸವದ ಅಂಗವಾಗಿ ಉತ್ಸವ ಮೂರ್ತಿಗೆ ಬೆಳಗಿನ ಜಾವ 3.30ರಿಂದ ವಿಶೇಷ ಪೂಜೆ ನೆರವೇರಿಸಲಾಗುವುದು.
ಪೌರಾಣಿಕ ಹಿನ್ನೆಲೆ: ಪೌರಾಣಿಕ ಹಿನ್ನೆಲೆ ಇರುವ ಕ್ಷೇತ್ರದಲ್ಲಿ ಸುಮಾರು 600 ವರ್ಷದ ಹಿಂದೆ ಸುಬ್ರಮಣ್ಯಸ್ವಾಮಿ ಸರ್ಪ ರೂಪದಲ್ಲಿ ತಪಸ್ಸು ಮಾಡುವಾಗ ಗರುಡನಿಂದ ತಪಸ್ಸಿಗೆ ತೊಂದರೆಯಾಗಿತ್ತಂತೆ. ಅದೇ ಸಂದರ್ಭದಲ್ಲಿ ಗರುಡನ ಸಂಬಂಧಿ ಲಕ್ಷ್ಮೀನರಸಿಂಹಸ್ವಾಮಿ ಅಭಯ ನೀಡಿ ಸಹಾಯ ಮಾಡಿದನಂತೆ. ಹೀಗಾಗಿ ದೇವಾಲಯದ ಗರ್ಭಗುಡಿಯಲ್ಲಿರುವ ಏಕಶಿಲಾ ಉದ್ಭವ ಮೂರ್ತಿಯ ಮುಂಭಾಗ ಸುಬ್ರಮಣ್ಯಸ್ವಾಮಿ ಮೂರ್ತಿ ಇದ್ದರೆ ಹಿಂಭಾಗದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ಮೂರ್ತಿ ಕಾಣಬಹುದು. ಈ ಹಿನ್ನೆಲೆಯಲ್ಲಿ ಬ್ರಹ್ಮ ರಥೋತ್ಸವದ ಸಮಯದಲ್ಲಿ ಗರುಡ ಪಕ್ಷಿ ಪ್ರದಕ್ಷಿಣೆ ಹಾಕುವುದು ವಿಶೇಷವಾಗಿದೆ. ಇದೇ ಸಮಯದಲ್ಲಿ ಮೂಲ ವಿಗ್ರಹದ ಸ್ಥಾನದಲ್ಲಿ ಸರ್ಪವೊಂದು ಕಾಣಿಸುವುದು ಸೋಜಿಗವೇ ಸರಿ.
ನಾಗರಾಧನೆ:
ಇಲ್ಲಿನ ಅಶ್ವತ್ಥಕಟ್ಟೆಯ ಮೇಲಿನ ನಾಗರಕಲ್ಲಿನ ಪೂಜೆ ವಿಶೇಷತೆಯಿಂದ ಕೂಡಿದ್ದು, ನಾಗದೋಷ ಪರಿಹಾರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ನಾಗರಕಲ್ಲಿಗೆ ಮಹಿಳೆಯರು ಹಾಲೆರೆದು ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುತ್ತಾರೆ. ನಾಗರಪಂಚಮಿಯಂದು ಅತಿಹೆಚ್ಚಿನ ಭಕ್ತರು ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಬರೋಬ್ಬರಿ 10ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳನ್ನು ಭಕ್ತರು ದೇವಸ್ಥಾನದ ಸುತ್ತ ಮುತ್ತ ಪ್ರತಿಷ್ಠಾಪಿಸಿದ್ದಾರೆ.
ದನಗಳ ಜಾತ್ರೆ ಅಬ್ಬರ: ಪ್ರತಿವರ್ಷ ಡಿಸೆಂಬರ್ ಕೊನೇ ವಾರದಲ್ಲಿ ನಡೆಯುವ ದನಗಳ ಜಾತ್ರೆಗೆ ವಿಶೇಷತೆ ಇದೆ, ಲಕ್ಷಾಂತರ ರೂ.ವಹಿವಾಟು ನಡೆಯುವ ಜಾತ್ರೆಗೆ ನೆರೆ ಜಿಲ್ಲೆ, ಹೊರರಾಜ್ಯದ ದನಗಳೂ ಜಮಾಯಿಸುತ್ತವೆ. ದಶಕಗಳ ಇತಿಹಾಸ ಹೊಂದಿರುವ ಜಾತ್ರೆಯ ವಿಶೇಷತೆಯೆಂದರೆ ಈ ಭಾಗದ ರೈತರು ರಾಸುಗಳನ್ನು ಖರೀದಿಸುವುದಕ್ಕಿಂತ ಅವುಗಳ ಮಾರಾಟಕ್ಕೆ ಒತ್ತು ನೀಡುತ್ತಾರೆ. ಈ ಭಾಗದಲ್ಲಿ ನೀರಿನ ಸಮಸ್ಯೆಯಿಂದ ರಾಸುಗಳಿಗೆ ಮೇವು ಒದಗಿಸಲು ಸಾಧ್ಯವಾಗದ ಕಾರಣ ಮುಂಗಾರು ಬಳಿಕ ಮತ್ತೆ ರಾಸುಗಳನ್ನು ಖರೀದಿಸುವ ಚಿಂತನೆಯಿಂದ ದನಗಳ ಜಾತ್ರೆಯಲ್ಲಿ ರಾಸುಗಳನ್ನು ಮಾರಾಟ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಹುಂಡಿಯಲ್ಲಿ ಹಣ ಎಣಿಕೆ: ಲಕ್ಷಾಂತರ ಭಕ್ತರನ್ನು ಹೊಂದಿರುವ ಘಾಟಿ ಕ್ಷೇತ್ರದಲ್ಲಿ ಸಂಗ್ರಹವಾಗುವ ದಕ್ಷಿಣೆ ಏಣಿಕೆಯೂ ಪ್ರಸಿದ್ಧಿ ಪಡೆದಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಹುಂಡಿ ಎಣಿಕೆ ಮಾಡಲಾಗುವುದು. ಲಕ್ಷಾಂತರ ರೂ ಸಂಗ್ರಹವಾಗಿರುತ್ತದೆ. ಕರೊನಾ ಸಂದರ್ಭದಲ್ಲೂ ಹುಂಡಿಯ ದಕ್ಷಿಣಿಗೆ ಕೊರತೆ ಬಂದಿಲ್ಲ ಎನ್ನಲಾಗಿದೆ.
ಮಾರ್ಗ: ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ, ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ನಿಂದ ಸ್ವಲ್ಪ ಮುಂದೆ ಹೋಗಿ ಕಂಟನಕುಂಟೆ ಬಳಿ ಬಲಕ್ಕೆ ತಿರುಗಿದರೆ ಘಾಟಿ ಕ್ಷೇತ್ರದ ಮುಖ್ಯದ್ವಾರ ಪ್ರವೇಶಿಸಬೇಕು. ಅಲ್ಲಿಂದ ತೂಬಗೆರೆ ಮಾರ್ಗವಾಗಿ ಸುಮಾರು 20 ಕಿ.ಮೀ ಕ್ರಮಿಸಿದರೆ ಕ್ಷೇತ್ರ ಸಿಗಲಿದೆ.
*ನೆಲಮಂಗಲದಿಂದ ಮಧುರೆ ಮಾರ್ಗವಾಗಿ ಬಂದರೆ 25 ಕಿ.ಮೀ ಅಂತರದಲ್ಲಿ ಕ್ಷೇತ್ರ ತಲುಪಬಹುದು.
*ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ಗೆ ಬರುವ 1 ಕಿ.ಮೀ ಅಂತರದಲ್ಲೇ ಎಡಕ್ಕೆ ತಿರುಗಿ ಘಾಟಿ ಮುಖ್ಯದ್ವಾರ ಪ್ರವೇಶಿ 20 ಕಿ.ಮೀ ಸಾಗಿದರೆ ಘಾಟಿ ದರ್ಶನವಾಗಲಿದೆ.