

ಅಕ್ಕಲಕೋಟ: ಮಹಾರಾಷ್ಟ್ರ ಗಡಿಭಾಗದ ನಾಗಣಸೂರ ಗ್ರಾಮದ ರೈತರೊಬ್ಬರು ಶ್ರದ್ಧೆಯೊಂದಿಗೆ ಬೆವರು ಸುರಿಸಿ ಕಾಯಕ ಮಾಡುವ ಮೂಲಕ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಸೇವಂತಿ ಹೂವು ಕೃಷಿಯಲ್ಲಿ ಮಹತ್ತರ ಸಾಧನೆ ಮೂಲಕ ನಿರೀಕ್ಷಿತ ಆದಾಯ ಪಡೆಯುತ್ತಿದ್ದಾರೆ ರೈತ ಪ್ರಚಂಡೆಪ್ಪ ಎನ್.ಪ್ರಚಂಡೆ. ಅಕ್ಷರ ಕಲಿಯದಿದ್ದರೂ ಬಾಲ್ಯದಿಂದ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಇವರು, ಆತ್ಮವಿಶ್ವಾಸದಿಂದ ದುಡಿದರೆ ಹಣ ಸಂಪಾದನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
20 ಎಕರೆ ಭೂಮಿ ಹೊಂದಿರುವ ಪ್ರಚಂಡೆಪ್ಪ ಪ್ರತಿವರ್ಷ ದ್ರಾಕ್ಷಿ, ಬಾಳೆ, ಕಬ್ಬು, ಗೋಧಿ, ಕಡಲೆ, ಜೋಳ, ಕಲ್ಲಂಗಡಿ ಇತ್ಯಾದಿ ಬೆಳೆ ಬೆಳೆಯುತ್ತಾರೆ. ಕಳೆದ ವರ್ಷ ಮಳೆ ಹೆಚ್ಚಾದ ಕಾರಣ ಕಲ್ಲಂಗಡಿ, ಬಾಳೆ ಹಾನಿಗೀಡಾಗಿದ್ದವು. ಬಾಳೆ ಕೇವಲ 3 ರೂಪಾಯಿ ಕೆಜಿ ಮಾರಿದರೆ, ಕಲ್ಲಂಗಡಿ ಕೊಂಡುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಹೀಗಾಗಿ 10 ಎಕರೆಯಲ್ಲಿನ ಈ ಬೆಳೆಗಳು ಪ್ರಚಂಡೆ ಕಣ್ಣಲ್ಲಿ ನೀರ್ಹನಿ ಚಿಮ್ಮುವಂತೆ ಮಾಡಿದ್ದವು. ದ್ರಾಕ್ಷಿ ಬೆಳೆ ಇದ್ದರೂ ಹವಾಮಾನ ವೈಪರೀತ್ಯದಿಂದಾಗಿ ಉತ್ತಮ ಫಸಲು ಬಂದಿಲ್ಲ. ಬಳಿಕ ಸೇವಂತಿ ಹೂವಿನ ಕೃಷಿಯತ್ತ ಚಿತ್ತ ಹರಿಸಿದ್ದು, ನಿರೀಕ್ಷಿತ ಫಲ ಕೊಡುತ್ತಿದೆ.
ಐದು ತಿಂಗಳ ಹಿಂದೆ ಮಿತ್ರ ಸಚಿನ್ ಮಂಟಗಿ ಸಹಕಾರದಿಂದ ಸೇವಂತಿಯ 1,300 ಸಸಿ ತಂದು ಎರಡು ಎಕರೆಯಲ್ಲಿ ನಾಟಿ ಮಾಡಿದ್ದು, ಒಂದೂವರೆ ಲಕ್ಷ ರೂ. ಖಚರ್ು ಮಾಡಿಕೊಂಡಿದ್ದಾರೆ. ಇದೀಗ ಸೇವಂತಿ ಹೂವಿಗೆ ಭಾರಿ ಬೇಡಿಕೆ ಇದ್ದು, ನಿರೀಕ್ಷಿತ ಆದಾಯ ಪಡೆಯುತ್ತ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ. ಪುಣೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಹೋದರ ಗುರಪ್ಪ ಪ್ರಚಂಡೆ ಇವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಪ್ರತಿದಿನ 8-12 ಜನ ಹೂವು ಕಟಾವು ಮಾಡುತ್ತಾರೆ. ನಾಗಣಸೂರ ಸುತ್ತಮುತ್ತಲ ಗ್ರಾಮಸ್ಥರು ಹೂವು ಖರೀದಿಸುತ್ತಿದ್ದು, ಕೆಜಿಗೆ 180 ರೂ.ವರೆಗೆ ಮಾರಾಟವಾಗುತ್ತಿದೆ. ರಸ್ತೆ ಬದಿಯಲ್ಲೇ ತೋಟ ಇರುವುದರಿಂದ ಸಾವಿರಾರು ಜನರು, ವಿಶೇಷವಾಗಿ ರೈತರು ಸೇವಂತಿ ನೋಡಲು ಬರುತ್ತಿದ್ದಾರೆ. ಫೋಟೋ, ವಿಡಿಯೋ ಚಿತ್ರೀಕರಿಸಿಕೊಂಡು ರೈತನ ಸಾಧನೆ ಮತ್ತು ಶ್ರಮವನ್ನು ಕೊಂಡಾಡುತ್ತಿದ್ದಾರೆ.
ಅಣ್ಣ ಗುರಪ್ಪ ಮಾರ್ಗದರ್ಶನದಲ್ಲಿ ಕೃಷಿ ಮಾಡುತ್ತಿದ್ದು, ಬಾಳೆ, ಕಲ್ಲಂಗಡಿ ಕೈಕೊಟ್ಟಾಗ ಕಡಿಮೆ ಅವಧಿಯಲ್ಲಿ ಹೆಚ್ಚು ಉತ್ಪನ್ನ ಕೊಡುವ ಸೇವಂತಿ ಹೂವು ಬೆಳೆದಿದ್ದೇನೆ. 2 ಎಕರೆಯಲ್ಲಿ 8 ಲಕ್ಷ ರೂ. ಆದಾಯ ಬಂದಿದ್ದು ಖುಷಿ ಕೊಟ್ಟಿದೆ. ರೈತರು ಕೇವಲ ಒಂದೆರಡು ಬೆಳೆಗಳ ಮೇಲೆ ಅವಲಂಬಿಸದೆ ಆಧುನಿಕ ಪದ್ಧತಿಯಲ್ಲಿ ವ್ಯವಸಾಯ ಮಾಡಬೇಕು.
| ಪ್ರಚಂಡೆಪ್ಪ ಪ್ರಚಂಡೆ, ಸೇವಂತಿ ಬೆಳೆದ ರೈತ
ಲಾಕ್ಡೌನ್ ನಂತರ ಗ್ರಾಮೀಣ ಭಾಗದಲ್ಲಿ ವಿವಿಧ ಕಾರ್ಯಕ್ರಮಗಳಿಗಾಗಿ ಹೂವಿನ ಬೇಡಿಕೆ ಕ್ರಮೇಣ ಹೆಚ್ಚಾಗುತ್ತಿದೆ. ಅದರಂತೆ ನಾಗಣಸೂರದ ಪ್ರಚಂಡೆಪ್ಪ ಬೆಳೆದ ಸೇವಂತಿಗೆ ಭಾರಿ ಡಿಮಾಂಡ್ ಇದೆ. ಸ್ಥಳೀಯವಾಗಿ ಹೂವು ಸಿಗುತ್ತಿರುವುದರಿಂದ ಕಲಬುರಗಿ, ಸೊಲ್ಲಾಪುರ, ಅಕ್ಕಲಕೋಟಕ್ಕೆ ಹೋಗಬೇಕಾದ ವೆಚ್ಚ ಮತ್ತು ಸಮಯ ಉಳಿತಾಯ ಆಗುತ್ತಿದೆ.
| ಪುಂಡಲೀಕ ಫುಲಾರಿ, ಹೂವಿನ ವ್ಯಾಪಾರಿ